ಬೀಗ ಒಡೆದು ಒಳ ನುಗ್ಗಿದ ಕಳ್ಳರು; 4.5 ಲಕ್ಷ ನಗದು , 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸಹಿತ ಪರಾರಿ!

thief
Published on

ಬೆಂಗಳೂರು: ಮಾಲೀಕರು ಇಲ್ಲದೆ ಇದ್ದಾಗ ಮನೆಗೆ ನುಗ್ಗಿರುವ ಕಳ್ಳರು ವಿವಿಧ ಬಗೆಯ ಚಿನ್ನಾಭರಣ, 4.5 ಲಕ್ಷ ರೂ. ನಗದು ಸೇರಿದಂತೆ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿದ್ದಾರೆ.

ಹಲಸೂರಿನ ಮರ್ಫಿಟೌನ್‌ನ ನಿವಾಸಿ ರಜೀನಾ ಲೂಯೀಸ್ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಕೊಟ್ಟ ದೂರಿನ ಮೇರೆಗೆ ಹಲಸೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

ಲೂಯೀಸ್ ತನ್ನ ಪತಿ ಮತ್ತು ಮಕ್ಕಳ ಜತೆಗೆ ನೆಲೆಸಿದ್ದಾರೆ. ದಂಪತಿ ಕೆಲಸಕ್ಕೆ ಹೋಗುತ್ತಿದ್ದು, ಮಕ್ಕಳು ಶಾಲಾ-ಕಾಲೇಜಿಗೆ ಹೋಗುತ್ತಿದ್ದಾರೆ. ಮನೆ ಖರೀದಿ ಮಾಡುವ ಉದ್ದೇಶಕ್ಕೆ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ ಚಿನ್ನಾಭರಣವನ್ನು ಅಡಮಾನವಿಡಲು ಬಿಡಿಸಿಕೊಂಡು ಮನೆಗೆ ತಂದಿದ್ದರು.

ಮೇ 26ರಂದು ಎಂದಿನಂತೆ ಮಕ್ಕಳು ತರಗತಿಗೆ ಹೋಗಿದ್ದು, ದಂಪತಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಕಳ್ಳರು ಮನೆ ಬೀಗ ಒಡೆದು ಒಳ ನುಗ್ಗಿ ವಿವಿಧ ಬಗೆಯ ಚಿನ್ನಾಭರಣ ಮತ್ತು 4.5 ಲಕ್ಷ ರೂ. ನಗದು ಸೇರಿದಂತೆ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದರು.

ಮಧ್ಯಾಹ್ನ 3.45ರಲ್ಲಿ ಮಗಳು ತರಗತಿ ಮುಗಿಸಿಕೊಂಡು ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಮನೆ ಮಾಲೀಕರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಹಲಸೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net