ಮಲ ಹೊರುವ ವ್ಯವಸ್ಥೆಗೆ ಕೊನೆಯೆಂದು?; 5 ವರ್ಷದಲ್ಲಿ 322 ಸಫಾಯಿ ಕರ್ಮಚಾರಿಗಳ ನಿಧನ

Manhole
Published on

| ರಮೇಶ ದೊಡ್ಡಪುರ

ಶತಮಾನಗಳಿಂದ ಚಾಲ್ತಿಯಲ್ಲಿದ್ದ ಅಮಾನವೀಯ ಮಲ ಹೊರುವ ಪದ್ಧತಿ ನಿಷೇಧಿಸಿ ಕಾಯ್ದೆ ರೂಪಿಸಿ ಮೂರು ದಶಕ ಸಮೀಪಿಸುತ್ತಿದ್ದರೂ ದೇಶದಲ್ಲಿ ಮಲಗುಂಡಿಯಲ್ಲಿ ಸಾವನ್ನಪು್ಪವವರ ಸಂಖ್ಯೆ ಕಡಿಮೆಯಾಗಿಲ್ಲ.

ಮಲಗುಂಡಿ ಸ್ವಚ್ಛಗೊಳಿಸಲು ಇಳಿದು ದೇಶದಲ್ಲಿ ಕಳೆದ ಐದು ವರ್ಷದಲ್ಲಿ 322 ಸಫಾಯಿ ಕರ್ಮಚಾರಿಗಳು ಮೃತಪಟ್ಟಿದ್ದಾರೆ ಎಂದು ಸರ್ಕಾರದ ಅಧಿಕೃತ ಅಂಕಿಅಂಶಗಳೇ ತಿಳಿಸುತ್ತಿದ್ದು, ವರದಿಯಾಗದ ಪ್ರಕರಣಗಳು ಇನ್ನೂ ಅಧಿಕ ಎನ್ನಲಾಗಿದೆ. ಕರ್ನಾಟಕದಲ್ಲಿ ಕಳೆದೊಂದು ವರ್ಷದಲ್ಲಿ 5 ಜನರು ಮೃತಪಟ್ಟ ವರದಿಯಾಗಿದೆ.

7ನೇ ಸ್ಥಾನದಲ್ಲಿ ಕರ್ನಾಟಕ: ಐದು ವರ್ಷದಲ್ಲಿ ದೇಶದಲ್ಲಿ 322 ಜನರು ಈ ರೀತಿ ನಿಧನರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 55, ತಮಿಳುನಾಡಿನಲ್ಲಿ 44, ದೆಹಲಿಯಲ್ಲಿ 42, ಹರ್ಯಾಣದಲ್ಲಿ 33, ಮಹಾರಾಷ್ಟ್ರದಲ್ಲಿ 30, ಗುಜರಾತ್​ನಲ್ಲಿ 28ರ ನಂತರ, 26 ಸಾವುಗಳಾಗಿರುವ ಕರ್ನಾಟಕ ಏಳನೇ ಸ್ಥಾನದಲ್ಲಿದೆ. 2017ರಿಂದ 2021ರವರೆಗೆ ಪ್ರತಿ ವರ್ಷ ಕ್ರಮವಾಗಿ 3,9,7,2 ಹಾಗೂ 5 ಸಾವುಗಳು ಸಂಭವಿಸಿವೆ. 2021ರಲ್ಲಿ ಕರ್ನಾಟಕದ ಜತೆಗೆ ತಮಿಳುನಾಡಿ ನಲ್ಲೂ 5 ಸಾವುಗಳು ಸಂಭವಿಸಿದ್ದು, ದೇಶದಲ್ಲೆ ಮೊದಲ ಸ್ಥಾನದಲ್ಲಿವೆ.

ಮಲ ಹೊರುವ ಪದ್ಧತಿ ನಿಷೇಧವಾಗಿರುವ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯ ಅರಿವು ಕಾರ್ವಿುಕರಿಗೆ ಹಾಗೂ ಮಾಲೀಕರಿಗೆ ಇಲ್ಲದಿರುವುದು ದೊಡ್ಡ ಸಮಸ್ಯೆ. ಸ್ಥಳೀಯ ಸಂಸ್ಥೆಗಳೊಂದಿಗಿರುವ ಸಫಾಯಿ ಕರ್ಮಚಾರಿಗಳಲ್ಲಿ ಜಾಗೃತಿ ಇದೆಯಾದರೂ ಖಾಸಗಿ ವ್ಯಕ್ತಿಗಳು ನಿರುದ್ಯೋಗಿಗಳಿಗೆ ಹಣದಾಸೆ ತೋರಿಸಿ ಬಳಸಿಕೊಳ್ಳುತ್ತಿದ್ದಾರೆ. ಕಠಿಣ ಶಿಕ್ಷೆ ಕೊಡಿಸುವುದೂ ಸಮಸ್ಯೆಗೆ ಒಂದು ಮಟ್ಟಿನ ಪರಿಹಾರ ನೀಡುತ್ತದೆ. | ಕೋಟೆ ಎಂ. ಶಿವಣ್ಣ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ

ಅಂಕಿಅಂಶಗಳಲ್ಲಿ ವ್ಯತ್ಯಾಸ: ಕೇಂದ್ರ ಸರ್ಕಾರದ ಸಮೀಕ್ಷೆಯಂತೆ ಕರ್ನಾಟಕದಲ್ಲಿ 2,937 ಜನರು ಸೇರಿ ದೇಶದಲ್ಲಿ 58,098 ಜನರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. 2021ರಲ್ಲಿ ದೇಶದ ಆಯ್ದ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಸಮೀಕ್ಷೆ ಮಾಡಿದ್ದು, ಕರ್ನಾಟಕದ 10 ಜಿಲ್ಲೆಗಳಲ್ಲೆ 5,080 ಜನರಿದ್ದಾರೆ ಎಂಬ ವರದಿಯಿದೆ. ಸರ್ಕಾರೇತರ ಸಂಸ್ಥೆ ಸಫಾಯಿ ಕರ್ಮಚಾರಿ ಆಂದೋಲನ್ ಅನ್ವಯ ದೇಶದಲ್ಲಿ 7.7 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಮಲಗುಂಡಿಯಲ್ಲಿ ನಿಧನರಾದವರ ಸಂಖ್ಯೆಯಲ್ಲೂ ಕೆಲವು ವ್ಯತ್ಯಾಸಗಳಿವೆ.

ಪರಿಹಾರ ಮಾರ್ಗದಲ್ಲೆ ದೋಷ: ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಜಗದೀಶ ಹಿರೇಮನಿ ಅವರ ಪ್ರಕಾರ, ಈ ಕಾರ್ಯದಲ್ಲಿ ತೊಡಗಿರುವವರಿಗೆ ತರಬೇತಿ ನೀಡಿ, ಪರಿಹಾರ ಹಣ, ಸಾಲ ನೀಡಲಾಗುತ್ತದೆ. ಆದರೆ ಸ್ವಚ್ಛಗೊಳಿಸಲು ಸಕ್ಕಿಂಗ್ ಹಾಗೂ ಜೆಟ್ಟಿಂಗ್ ಯಂತ್ರಗಳನ್ನೇ ಖರೀದಿ ಮಾಡುವುದಿಲ್ಲ. ಉದ್ಯೋಗ ಇಲ್ಲದ ಹೊಸ ವರ್ಗ ಈ ಕಾರ್ಯದಲ್ಲಿ ಮತ್ತೆ ತೊಡಗಿಕೊಳ್ಳುತ್ತಿದೆ. ಈಗ ಮಲಗುಂಡಿ ಸ್ವಚ್ಛಗೊಳಿಸಲು ಸೆಪ್ಟ್​ರಿಕ್ಸ್ ಎಂಬ ಪುಡಿ ಬಂದಿದ್ದು, ಗುಂಡಿಗೆ ಹಾಕಿದರೆ ಘನ ಅಂಶವನ್ನು ಸಂಪೂರ್ಣ ಕರಗಿಸಿ ತಿಳಿಯಾಗಿಸುತ್ತದೆ. ಸಾಮಾನ್ಯ ಪಂಪ್ ಬಳಸಿ ತೋಟಕ್ಕೆ ಬಳಸಬಹುದಾಗಿದೆ. ರಾಯಚೂರು ಜಿಲ್ಲಾ ಪಂಚಾಯಿತಿ ವತಿಯಿಂದ ಸಿಂಧನೂರು ತಾಲೂಕಿನ ಜಾಲಿಹಾಳ ಗ್ರಾಮ ಪಂಚಾಯಿತಿಯ ರಂಗಾಪೂರ ಕ್ಯಾಂಪ್ ಸೇರಿ ಅನೇಕ ಕಡೆಗಳಲ್ಲಿ ಪ್ರಾಯೋಗಿಕವಾಗಿ ಬಳಸಿ ಸಫಲವಾಗಿದೆ. ಇಂತಹ ಮಾರ್ಗಗಳ ಮೂಲಕ ಅನಿಷ್ಟ ಪದ್ಧತಿಯನ್ನು ಕೊನೆಗಾಣಿಸಬೇಕಿದೆ.’

ಮಲಹೊರುವ ಪದ್ಧತಿ ಇನ್ನೂ ಜೀವಂತವಾಗಿದೆ ಎಂದು ಸಮಾಜ, ಸರ್ಕಾರ, ಅಧಿಕಾರಿಗಳು ಮೊದಲು ಒಪ್ಪಬೇಕು, ಅದರಲ್ಲಿ ತೊಡಗಿರುವವರಿಗೆ ಒಂದು ಸರ್ಕಾರಿ ನೌಕರಿ ನೀಡದಷ್ಟು ನಮ್ಮ ದೇಶದಲ್ಲಿ ದಾರಿದ್ರ್ಯವಿಲ್ಲ. ಸಮಸ್ಯೆಗೆ ಪರಿಹಾರ ಕಾಣುವ ಮನಃಸ್ಥಿತಿ ಬೇಕಷ್ಟೆ. | ಡಾ. ಬೇಜವಾಡ ವಿಲ್ಸನ್ ಸಫಾಯಿ ಕರ್ಮಚಾರಿ ಹೋರಾಟಗಾರ

ಕಾಯ್ದೆ ಉಲ್ಲಂಘನೆಗೆ ಶಿಕ್ಷೆ: ಮಲಹೊರುವ ಸಲುವಾಗಿ ವ್ಯಕ್ತಿಗಳನ್ನು ನೇಮಿಸಿಕೊಳ್ಳುವಿಕೆ ನಿಷೇಧ ಹಾಗೂ ಅವರ ಪುನರ್ವಸತಿ ಕಾಯ್ದೆ 2013ರ ಮೂಲಕ ಮಲ ಹೊರುವ ಪದ್ಧತಿ ನಿಷೇಧಿಸಲಾಗಿದೆ. ಕಾಯ್ದೆಯ 5 ಹಾಗೂ 6ನೇ ಅಂಶಗಳ ಪ್ರಕಾರ, ಮಾನವರು ಮಲಗುಂಡಿಯನ್ನು ಸ್ವಚ್ಛಗೊಳಿಸಬೇಕಾದಂತಹ ಶೌಚಗೃಹಗಳನ್ನು ನಿಷೇಧಿಸಲಾಗಿದೆ, ಕಾಯ್ದೆ ಜಾರಿಗೂ ಮುನ್ನ ಇದ್ದ ಇಂತಹ ಶೌಚಗೃಹಗಳನ್ನು ಪರಿವರ್ತಿಸಿಕೊಳ್ಳಬೇಕು. ಇವುಗಳ ಉಲ್ಲಂಘನೆಗೆ ಮೊದಲ ಬಾರಿಗೆ ಒಂದು ವರ್ಷದವರೆಗೆ ಜೈಲು ಅಥವಾ 50 ಸಾವಿರ ರೂ. ದಂಡ ಅಥವಾ ಎರಡೂ ಶಿಕ್ಷೆ ವಿಧಿಸಬಹುದು. ನಂತರವೂ ಉಲ್ಲಂಘಿಸಿದರೆ ಎರಡು ವರ್ಷದವರೆಗೆ ಜೈಲು ಅಥವಾ ಒಂದು ಲಕ್ಷ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಕಾಯ್ದೆಯ 7ನೇ ಅಂಶದಂತೆ, ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ವ್ಯಕ್ತಿಯನ್ನು ಮಲಗುಂಡಿ ಹಾಗೂ ಸೀವೇಜ್ ಟ್ಯಾಂಕ್ ಸ್ವಚ್ಛತೆಗೆ ನೇಮಿಸಿಕೊಳ್ಳುವಂತಿಲ್ಲ. ಇದನ್ನು ಉಲ್ಲಂಘಿಸುವವರಿಗೆ ಮೊದಲ ಬಾರಿಗೆ ಎರಡು ವರ್ಷ ಜೈಲು ಅಥವಾ ಎರಡು ಲಕ್ಷ ರೂ. ದಂಡ ಅಥವಾ ಎರಡೂ ಶಿಕ್ಷೆ. ಎರಡನೇ ಬಾರಿ ಉಲ್ಲಂಘನೆಗೆ ಐದು ವರ್ಷದವರೆಗೆ ಶಿಕ್ಷೆ ಅಥವಾ ಐದು ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದು. ಈ ಕಾಯ್ದೆಯಡಿ ದಾಖಲಾಗುವ ದೂರುಗಳು ಜಾಮೀನುರಹಿತವಾಗಿರುತ್ತವೆ.

ನಡೆಯುತ್ತಲೇ ಇಲ್ಲ ಎನ್ನುವ ಸರ್ಕಾರ: ಮಲಹೊರುವ ಪದ್ಧತಿಯ ಕುರಿತು ಆರ್​ಟಿಐ ಮುಖಾಂತರ ಹಾಗೂ ಸಂಸತ್​ನಲ್ಲಿ ಪ್ರಶ್ನೆಗಳಿಗೆ ಸರ್ಕಾರಗಳು ಉತ್ತರಿಸುವಾಗ, ‘ದೇಶದಲ್ಲಿ ಪ್ರಸ್ತುತ ಯಾರೂ ಮಲ ಹೊರುವ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ವರದಿಯಾಗಿಲ್ಲ’ ಎಂದು ಸಿದ್ಧ ಉತ್ತರ ನೀಡುತ್ತಿವೆ. ಅದೇ ಉತ್ತರದಲ್ಲಿ, ‘ಸೀವೇಜ್ ಟ್ಯಾಂಕ್ ಮತ್ತು ಸೆಪ್ಟಿಕ್ ಟ್ಯಾಂಕ್​ಗಳಲ್ಲಿ ಮೃತಪಟ್ಟವರು’ ಎಂದು ಉದ್ದದ ಪಟ್ಟಿಯನ್ನೂ ಸರ್ಕಾರವೇ ಹೇಳುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಕುರಿತು ಬೇಸರ ವ್ಯಕ್ತಪಡಿಸುವ ಸಫಾಯಿ ಕರ್ಮಚಾರಿ ಆಂದೋಲನದ ಮುಖಂಡ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಡಾ. ಬೇಜವಾಡ ವಿಲ್ಸನ್ ಅವರು, ‘ಸರ್ಕಾರವು ಈ ಅನಿಷ್ಟ ಪದ್ಧತಿಯನ್ನು ತೊಲಗಿಸಬೇಕೆಂಬ ನೈಜ ಕಾಳಜಿ ಹೊಂದಿಲ್ಲ. ಇಂತಹ ಪದ್ಧತಿ ಇದೆ ಎಂದು ಒಪ್ಪಿಕೊಂಡುಬಿಟ್ಟರೆ ವಿಶ್ವಮಟ್ಟದಲ್ಲಿ ಭಾರತವನ್ನು ನೋಡುವ ರೀತಿ ಬದಲಾಗಿಬಿಡುತ್ತದೆ ಎಂದು ಇವರು ಚಿಂತಿಸುತ್ತಾರೆ. ಈ ಮನಸ್ಥಿತಿ ಬದಲಾಗದಿದ್ದರೆ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ಶಿಕ್ಷೆ ಪ್ರಮಾಣ ಕಡಿಮೆ: ಕಾರ್ವಿುಕರು ನಿಧನರಾದ ಸಂದರ್ಭದಲ್ಲಿ ಅಥವಾ ಮಲಗುಂಡಿ ಸ್ವಚ್ಛಗೊಳಿಸುತ್ತಿರುವ ಪ್ರಕರಣಗಳು ವರದಿಯಾದಾಗ, ಮಾಲೀಕರ ವಿರುದ್ಧ ಪೊಲೀಸರು ಕಠಿಣ ನಿಯಮ ಅನ್ವಯ ಮಾಡುತ್ತಿಲ್ಲ. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಕೋಟೆ ಎಂ. ಶಿವಣ್ಣ, ‘ಪೊಲೀಸರು ಕಠಿಣ ಸೆಕ್ಷನ್ ಅನ್ವಯಿಸದ ವಿಚಾರ ಗಮನಕ್ಕೆ ಬಂದಿದೆ. ಅತ್ಯಂತ ಕಠಿಣ ಸೆಕ್ಷನ್ ಅನ್ವಯಿಸಿ ದೂರು ದಾಖಲಿಸುವಂತೆ ಜಿಲ್ಲಾ ಪ್ರವಾಸದ ವೇಳೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೇನೆ. ಅಧಿಕಾರಿಗಳಲ್ಲಿ ಈ ವಿಚಾರವಾಗಿ ಮತ್ತಷ್ಟು ಜಾಗೃತಿ, ಗಾಂಭೀರ್ಯ ಮೂಡಬೇಕಿದೆ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net