ಶ್ರಮಿಕ್​ ರೈಲುಗಳಲ್ಲಿ ಶಿಶುಗಳ ಕಿಲಕಿಲ! ಮಾರ್ಗ ಮಧ್ಯೆಯೇ ಹುಟ್ಟಿದವು 30 ಕಂದಮ್ಮಗಳು

shramikweb
Published on

ನವದೆಹಲಿ: ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ತಿಂಗಳ ಆರಂಭದಲ್ಲಿ ಶುರು ಮಾಡಿರುವ ಶ್ರಮಿಕ್​ ರೈಲು ಹೆರಿಗೆ ವಾರ್ಡ್​ ಆಗಿ ಪರಿಣಮಿಸುತ್ತಿದೆ.

ಕಾರಣ ಏನೆಂದರೆ ಇದಾಗಲೇ 30 ಮಕ್ಕಳು ಈ ರೈಲಿನಲ್ಲಿ ಜನಿಸಿದ್ದಾರೆ. ಮೇ 1ರಿಂದ ಇಲ್ಲಿಯವರೆಗೆ 30 ಮಂದಿಗೆ ಹೆರಿಗೆಯಾಗಿದೆ. ತಮ್ಮೂರಿಗೆ ಗರ್ಭಿಣಿಯರು ತಲುಪುವ ಮೊದಲೇ ರೈಲಿನಲ್ಲಿಯೇ ಹೆರಿಗೆ ಆಗುತ್ತಿದೆ. ವಲಸೆ ಕಾರ್ಮಿಕರಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಸರಿಯಾದ ತಿಳಿವಳಿಕೆ ಇರದ ಹಿನ್ನೆಲೆಯಲ್ಲಿ, ಮಹಿಳೆಯರು ಮೇಲಿಂದ ಮೇಲೆ ಗರ್ಭವತಿಯಾಗುತ್ತಿರುವುದು ಇದಕ್ಕೆ ಕಾರಣ ಎಂದಿದ್ದಾರೆ ರೈಲ್ವೆ ಅಧಿಕಾರಿಗಳು.

ಲಾಕ್​ಡೌನ್​ ಸಮಯದಲ್ಲಿ ಅದಾಗಲೇ ಅನೇಕರು ತುಂಬು ಗರ್ಭಿಣಿಯರಾಗಿದ್ದರು. ಇದೇ ಸಮಯದಲ್ಲಿ ಅವರನ್ನು ರೈಲುಗಳ ಮೂಲಕ ಅವರವರ ಊರುಗಳಿಗೆ ಕಳುಹಿಸಲಾಗಿತ್ತು. ಹೆರಿಗೆ ಸಮಯ ಹತ್ತಿರ ಬಂದ ಹಿನ್ನೆಲೆಯಲ್ಲಿ ರೈಲಿನಲ್ಲಿಯೇ ಪ್ರಸವವಾಗಿದೆ.

ಸುಮಾರು ಎರಡು ತಿಂಗಳಿಂನಿಂದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸರಿಯಾದ ಆಹಾರ, ನೀರು ಇರದ ಕಾರಣ ಹಾಗೂ ಗರ್ಭಿಣಿಯರು ಅತೀವ ಮಾನಸಿಕ ಗೊಂದಲಕ್ಕೆ ಈಡಾಗಿರುವ ಹಿನ್ನೆಲೆಯಲ್ಲಿ ಅನೇಕ ಮಂದಿ ಹೆರಿಗೆಯ ವೇಳೆ ಅಪಾರ ನೋವು, ತೊಂದರೆ ಅನುಭವಿಸಿದ್ದಾರೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ, ಮೇ 1 ರಿಂದ ಇಲ್ಲಿಯವರೆಗೆ ಭಾರತೀಯ ರೈಲ್ವೆ ಇಲಾಖೆ ಸುಮಾರು 37 ಲಕ್ಷ ವಲಸೆ ಕಾರ್ಮಿಕರನ್ನು 2,818 ಶ್ರಮಿಕ ವಿಶೇಷ ರೈಲುಗಳಲ್ಲಿ ಅವರವರ ಊರುಗಳಿಗೆ ತಲುಪಿಸಿದೆ ಎಂದು ರೈಲ್ವೆ ಸಚಿವಾಲಯ ರವಿವಾರ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net