ಮುಸ್ಲಿಮೇತರ ವೈದ್ಯರ ಮೇಲೆ ಹಲ್ಲೆ ಮಾಡಿ ಎಂದು ಭಾಷಣ- ವೀಡಿಯೋ ಬ್ಲಾಕ್​ ಮಾಡಿ ಎಂದ ಕೋರ್ಟ್​

bombay HCweb
Published on

ಮುಂಬೈ: ಆಲ್​​ ಇಂಡಿಯಾ ಮಜ್​ಲಿಸ್​-ಎ-ಇತ್ತೇಹಾದ್​-ಉಲ್​-ಮುಸ್ಲಿಮೀನ್​ (ಎಐಎಂಐಎಂ) ಸಂಘದ ಬೆಂಬಲಿಗ ಅಬು ಫೈಸಲ್​ ಎಂಬಾತ ಮಾಡಿರುವ ವೀಡಿಯೋಗಳನ್ನು ಕೂಡಲೇ ಬ್ಲಾಕ್​ ಮಾಡಿ ಎಂದು ಬಾಂಬೆ ಹೈಕೋರ್ಟ್​ ಸರ್ಕಾರಕ್ಕೆ ನಿರ್ದೇಶಿಸಿದೆ.

ಈತನ ವಿರುದ್ಧ ಇಮ್ರಾನ್​ ಖಾನ್​ ಎನ್ನುವವರು ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಮುಸ್ಲಿಮೇತರ ವೈದ್ಯರ ಮೇಲೆ ಹಲ್ಲೆ ನಡೆಸುವಂತೆ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾನೆ. ಸಾಲದು ಎಂಬುದಕ್ಕೆ ಭಾರತದಲ್ಲಿ ಕರೊನಾ ವೈರಸ್​ ಹರಡಲು ಮುಸ್ಲಿಮರೇ ಕಾರಣ ಎಂದು ಮಾಧ್ಯಮಗಳು ಬಿಂಬಿಸುತ್ತಿರುವುದಾಗಿ ಹೇಳಿಕೆ ನೀಡಿರುವ ಆತ, ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆಯನ್ನು ನಿಯಂತ್ರಿಸಲು ಆರ್​ಎಸ್​ಎಸ್​ ಪ್ರಯತ್ನ ಮಾಡುತ್ತಿದೆ, ಈ ಹಿನ್ನೆಲೆಯಲ್ಲಿ ಅದು ಅಭಿಯಾನ ಶುರು ಮಾಡಿದೆ ಎಂಬ ಹೇಳಿಕೆಯನ್ನೂ ನೀಡಿದ್ದಾನೆ. ಎಐಎಂಐಎಂ ಬೆಂಬಲಿಗ ಎಂದು ಹೇಳಿಕೊಳ್ಳುತ್ತಿರುವ ಈತ ಫೇಸ್​ಬುಕ್​, ವಾಟ್ಸ್​ಆ್ಯಪ್​, ಯೂಟ್ಯೂಬ್​ ಸೇರಿದಂತೆ ಜಾಲತಾಣಗಳಲ್ಲಿ ವೀಡಿಯೋ ಕ್ಲಿಪ್ಪಿಂಗ್​ ಹರಿಬಿಟ್ಟು, ದ್ವೇಷ ಭಾಷಣ ಮಾಡುತ್ತಿದ್ದಾನೆ ಎಂದು ಖಾನ್​ ದೂರಿದ್ದಾರೆ.

ಈ ವೀಡಿಯೋ ನೋಡಿದ ಕೆಲವು ಜನರು ಅದನ್ನು ನಿಜವೆಂದು ನಂಬುತ್ತಿದ್ದಾರೆ. ಈ ಮೂಲಕ ಭಾರತದಲ್ಲಿ ಕೋಮು ಕಲಹ ಉಂಟಾಗುತ್ತಿದೆ. ಅಶಾಂತಿ ಸೃಷ್ಟಿಸುವ ಗುರಿಯನ್ನು ಅಬು ಹೊಂದಿದ್ದಾನೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಇಮ್ರಾನ್​ ಖಾನ್​ ಅರ್ಜಿಯಲ್ಲಿ ತಿಳಿಸಿದ್ದಾರೆ. ಆಕ್ಷೇಪಾರ್ಹ ವೀಡಿಯೊವನ್ನು ಅಪ್‌ಲೋಡ್ ಮಾಡಿರುವ ಅಬು ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸುವಂತೆ ಹಾಗೂ ಸಾಮಾಜಿಕ ಜಾಲತಾಣದಿಂದ ಆತನನ್ನು ಶಾಶ್ವತವಾಗಿ ನಿರ್ಬಂಧಿಸುವಂತೆ ಖಾನ್​ ಕೋರಿದ್ದಾರೆ.

ಈತ ಹೇಳಿರುವ ವೀಡಿಯೋಗಳನ್ನು ಆಲಿಸುವಂತೆ ಪೊಲೀಸ್​ ಅಧಿಕಾರಿಗಳಿಗೆ ನ್ಯಾಯಮೂರ್ತಿಗಳಾದ ಆರ್.ಡಿ.ಧನುಕಾ ಮತ್ತು ಅಭಯ್ ಅಹುಜಾ ಅವರನ್ನೊಳಗೊಂಡ ನ್ಯಾಯಪೀಠವು ಆದೇಶಿಸಿದೆ. ಜತೆಗೆ, ಒಂದು ವೇಳೆ ಅರ್ಜಿದಾರರು ಆರೋಪಿಸಿರುವಂತೆ ಕೋಮು ಘರ್ಷಣೆಗೆ ಕಾರಣವಾಗಿರುವ ಹೇಳಿಕೆಗಳು ಅದರಲ್ಲಿ ಇದ್ದರೆ, ಆತನ ವಿರುದ್ಧ ತನಿಖೆ ನಡೆಸುವಂತೆ ಕೋರ್ಟ್​ ಹೇಳಿದೆ.

ಈ ನಿಟ್ಟಿನಲ್ಲಿ ಏನೇನು ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದರ ಕುರಿತು ಒಂದು ವಾರದಲ್ಲಿ ಪ್ರಮಾಣ ಪತ್ರ ಸಲ್ಲಿಸುವಂತೆ ಹೇಳಿರುವ ನ್ಯಾಯಮೂರ್ತಿಗಳು ವಿಚಾರಣೆ ಮುಂದೂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net