ನಿದ್ರೆಯಲ್ಲಿದ್ದ ಮಕ್ಕಳನ್ನು ಬಾವಿಗೆ ನೂಕಿ ಸಾವಿಗೆ ಶರಣಾದ ತಾಯಿ! ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | Well

ವಿಜಯವಾಣಿ - 2025-04-12T102613.732
Published on

Water Well: ಮನೆಯಲ್ಲಿನ ಬಾವಿಯಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಬಾವಿಗೆ ಬಿದ್ದು ಸಾವಿಗೀಡಾದ ದುರ್ಘಟನೆ ಕೇರಳದ ಅಳಿಕೋಡ್​ನಲ್ಲಿ ಸಂಭವಿಸಿದೆ.

ಮಧ್ಯರಾತ್ರಿ ಮನೆಯವರು ಮಲಗಿರುವ ವೇಳೆ ಎದ್ದು ಹೊರಬಂದ ಭಾಮಾ (45), ಮಕ್ಕಳಾದ ಶಿವಾನಂದ್ (14) ಮತ್ತು ಅಶ್ವಂತ್ (11) ಇಬ್ಬರನ್ನೂ ನಿದ್ರೆಯಿಂದ ಕರೆತಂದು, ಸಾವಿನ ಕೂಪಕ್ಕೆ ತಳ್ಳಿರಬಹುದು. ಮಕ್ಕಳನ್ನು ತಳ್ಳಿದ ಬಳಿಕ ಆಕೆಯೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಸಂಭವಿಸುವ ಸಮಯದಲ್ಲಿ ಭಾಮಾಳ ತಾಯಿ ಮತ್ತು ಸಹೋದರಿ ಮನೆಯಲ್ಲೇ ಇದ್ದರು ಎಂದು ಹೇಳಲಾಗಿದೆ.

ಹಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಭಾಮಾ, ಇದರಿಂದ ಹೊರಬರಲು ಆಗಾಗ್ಗೆ ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಮಾನಸಿಕ ಅಸ್ವಸ್ಥಳಾಗಿದ್ದ ಹಿನ್ನೆಲೆ ಭಾಮಾ ಕುಟುಂಬದವರು ಸದಾ ಆಕೆಯ ಸುತ್ತಮುತ್ತಲೇ ಇರುತ್ತಿದ್ದರು. ಒಂದು ರೀತಿ ಕಾವಲು ಕಾಯುತ್ತಿದ್ದರು ಎಂದೇ ಹೇಳಬಹುದು. ಶುಕ್ರವಾರ (ಏ.11) ಬೆಳಗಿನ ಜಾವ 2:30ಕ್ಕೆ, ಸಣ್ಣ ಶಬ್ದಕ್ಕೆ ದಿಢೀರ್​ ಎಚ್ಚರಗೊಂಡ ಭಾಮಾ ಸಹೋದರಿ, ಆಕೆಯ ಕೋಣೆಯನ್ನು ನೋಡಿದ್ದಾರೆ. ಆದರೆ, ಅಲ್ಲಿ ಭಾಮಾ ಮಾತ್ರವಲ್ಲದೇ ಮಕ್ಕಳು ಇಲ್ಲದಿರುವುದು ಕಂಡು ಅಚ್ಚರಿಗೆ ಒಳಗಾಗಿದ್ದರು.

ತಕ್ಷಣವೇ ನೆರೆಹೊರೆಯವರ ಸಹಾಯದಿಂದ, ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಡಿದ್ದಾರೆ. ಆದ್ರೆ, ಬಹಳ ಸಮಯದ ನಂತರ ಮನೆಯಲ್ಲಿದ್ದ ಬಾವಿಯಲ್ಲಿ ಮೂವರು ಜಿಗಿದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಪಡೆದ ವಲಪಟ್ಟಣಂ ಪೊಲೀಸರು, ಸ್ಥಳಕ್ಕೆ ಧಾವಿಸಿ ದೇಹಗಳಿಗಾಗಿ ಶೋಧ ನಡೆಸಿದರು. ಮಕ್ಕಳ ಚಪ್ಪಲಿ ಯಾವುದರ ಸುಳಿವು ಸಿಗದ ಹಿನ್ನೆಲೆ ಬಾವಿಗೆ ಹಾರಿರುವುದನ್ನು ಮೊದಲು ಪತ್ತೆಹಚ್ಚುವುದು ಕಷ್ಟಕರವಾಗಿದೆ. ನಂತರದಲ್ಲಿ ಅಗ್ನಿಶಾಮಕ ದಳದ ಸಹಾಯದಿಂದ ಬಾವಿಯಲ್ಲಿದ್ದ ಮಕ್ಕಳು ಮತ್ತು ಭಾಮಾ ಮೃತದೇಹಗಳನ್ನು ಹೊರತರಲಾಯಿತು.

ಮಾನಸಿಕ ಅಸ್ವಸ್ಥತೆಗೆ ಔಷಧಿ ತೆಗೆದುಕೊಳ್ಳುತ್ತಿದ್ದ ಭಾಮಾ ಕೆಲವು ತಿಂಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ. ಶಿವಾನಂದ್ ಮತ್ತು ಅಶ್ವಂತ್ ಅಝಿಕೋಡ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಾಗಿದ್ದರು. ವಲಪಟ್ಟಣಂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಎಎಸ್ಪಿ ಟ್ರೈನಿ ಬಿ. ಕಾರ್ತಿಕ್, ಇನ್ಸ್‌ಪೆಕ್ಟರ್ ಸಿ.ಪಿ. ಸುಮೇಶ್, ಎಸ್‌ಐ ಟಿ.ಎಂ. ವಿಪಿನ್ ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net