

Renu Desai: ರೇಣು ದೇಸಾಯಿ ಹೆಸರು ಟಾಲಿವುಡ್ ಮಂದಿಗೆ ಚಿರಪರಿಚಿತ. ಕಾರಣ, ಒಂದು ಕಾಲದಲ್ಲಿ ಅವರು ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಪತ್ನಿಯಾಗಿದ್ದರು. ಒಂದಷ್ಟು ವಿಚಾರಗಳಿಂದ ವಿಚ್ಛೇದನ ಪಡೆದರು. ಮೂರು ವಿವಾಹ ಆಗಿರುವ ಪವನ್ ಕಲ್ಯಾಣ್, ರೇಣು ದೇಸಾಯಿ ಅವರಿಂದ ವಿಚ್ಛೇದನ ಪಡೆದ ಕೆಲವೇ ವರ್ಷಗಳಲ್ಲಿ ರಷ್ಯಾದ ನಟಿ ಅನ್ನಾ ಲೆಜ್ನೆವಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮಧ್ಯೆ ರೇಣು ದೇಸಾಯಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಹಲವು ವಿಚಾರಗಳ ಕುರಿತಂತೆ ಕಡೆಗೂ ಮೌನ ಮುರಿದಿದ್ದಾರೆ.
ಇತ್ತೀಚೆಗಷ್ಟೇ ನಡೆದ ಪಾಡ್ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ ರೇಣು ದೇಸಾಯಿ, ತಮ್ಮ ವೈಯಕ್ತಿಕ ಜೀವನ ಸೇರಿದಂತೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡರು. ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ವಿಷಯಗಳು ಜಾಲತಾಣಗಳಲ್ಲಿ ಭಾರೀ ವೈರಲ್ ಆಯಿತು. ಆದರೆ, ಹಲವು ವಿಚಾರಗಳ ಮಧ್ಯೆ ಒಂದೇ ಒಂದು ವಿಚಾರ ಮಾತ್ರ ಮುನ್ನೆಲೆಗೆ ಬಂದಿರುವುದು ಇದೀಗ ರೇಣುರನ್ನು ತೀವ್ರ ಕೆರಳಿಸಿದೆ.
ಯಾಕಿಂತ ಸುದ್ದಿಗಳು ಹರಿದಾಡುತ್ತಿವೆ ಎಂಬುದು ನನಗೆ ನಿಜಕ್ಕೂ ಅರ್ಥವಾಗುತ್ತಿಲ್ಲ. ನಾನು ಎರಡನೇ ಮದುವೆ ಆಗ್ತೀನೋ, ಇಲ್ಲವೋ ಎಂಬುದನ್ನು ಇನ್ನೂ ಚಿಂತಿಸಿಯೇ ಇಲ್ಲ. ಈ ವಿಚಾರದಲ್ಲಿ ನನಗಿಲ್ಲದ ಆಸಕ್ತಿ ಇವರಿಗ್ಯಾಕೇ (ನೆಟ್ಟಿಗರು)?. ಇಂತಹ ಸುದ್ದಿಗಳಿಂದ ಸಮಾಜಕ್ಕೆ ಏನಾದರೂ ಪ್ರಯೋಜನವಿದೆಯೇ? ಎಂದು ಪ್ರಶ್ನಿಸಿದರು.
"ನನ್ನ ಎರಡನೇ ಮದುವೆ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಗಳು ಹರಿದಾಡುತ್ತಿವೆ. ಈ ವಿಷಯದಲ್ಲಿ ನನಗಿಂತ ಜನರಿಗೆ ತುಂಬಾ ಆಸಕ್ತಿ ಇದೆ ಎಂಬ ಸಂಗತಿ ನನಗೆ ಅರ್ಥವಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿರುವ ಆ ಪಾಡ್‌ಕ್ಯಾಸ್ಟ್‌ನಲ್ಲಿ, ಸಮಾಜಕ್ಕೆ ಉಪಯುಕ್ತವಾದ ಬಹಳ ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡಿದ್ದೇನೆ. ಆದರೆ, ಅವುಗಳನ್ನು ಚರ್ಚಿಸುವುದು ಬಿಟ್ಟು, ನನ್ನ ಎರಡನೇ ಮದುವೆ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ನೋಡಿ ನಾನು ನಿಮ್ಮೆಲ್ಲರಿಂದ ಬಯಸುವುದು ಒಂದೇ ವಿಷಯ. ದಯವಿಟ್ಟು ಈ 44 ವರ್ಷದ ಮಹಿಳೆಯ ಮದುವೆಯಿಂದ ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಿ" ಎಂದು ರೇಣು ದೇಸಾಯಿ ತಮ್ಮ ಜಾಲತಾಣದ ಖಾತೆಯಲ್ಲಿ ಬರೆದು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).