

Gold Price: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿಧಿಸಿರುವ ಪಾರಸ್ಪರಿಕ ಹಾಗೂ ಪ್ರತೀಕಾರದ ಸುಂಕ ಹೊರೆ ವಿಶ್ವದ ಮಾರುಕಟ್ಟೆಯನ್ನೇ ಅಲ್ಲೋಲ-ಕಲ್ಲೋಲ ಮಾಡಿಬಿಟ್ಟಿದೆ. ಪ್ರಸ್ತುತ 90 ದಿನಗಳ ಸುಂಕ ವಿರಾಮ ಘೋಷಿಸಿರುವ ಟ್ರಂಪ್, ಒಂದಷ್ಟು ಸುಧಾರಣೆಗಾಗಿ ಎದುರುನೋಡುತ್ತಿದ್ದಾರೆ. ಈ ಮಧ್ಯೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ಷಣ ಕ್ಷಣಕ್ಕೂ ಬದಲಾವಣೆಗಳು ನಡೆಯುತ್ತಿದ್ದು, ಚಿನ್ನದ ಬೆಲೆ ಮೇಲೆ ಭಾರೀ ಪರಿಣಾಮ ಬೀರಿದೆ.
ದಿನ ಕಳೆದಂತೆ ಚಿನ್ನದ ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತಿವೆ. ದೇಶದಲ್ಲಿ ಚಿನ್ನದ ದರ ದಾಖಲೆಯ ಮಟ್ಟವನ್ನು ದಾಖಲಿಸಿದೆ. 10 ಗ್ರಾಂ ಚಿನ್ನದ ದರ ಈಗ 96,000 ರೂ. ದಾಟಿದೆ. ಇದು ಶಿಖರದ ತುದಿಯತ್ತ ಸಾಗಿದಂತಾಗಿದೆ. ಪ್ರಸ್ತುತ ಇದೇ ಪರಿಸ್ಥಿತಿ ಮುಂದುವರಿದರೆ, ಭವಿಷ್ಯದಲ್ಲಿ ಚಿನ್ನದ ಬೆಲೆಗಳು ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.
ಅಂತರರಾಷ್ಟ್ರೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಚಿನ್ನದ ಬೆಲೆಗಳು ತೀವ್ರವಾಗಿ ಏರುತ್ತಿವೆ. ಈ ಸಂದರ್ಭದಲ್ಲಿ, ದೆಹಲಿಯಲ್ಲಿ ಶುಕ್ರವಾರ (ಏ.11) 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 6,250 ರೂ.ನಷ್ಟು ಹೆಚ್ಚಾಗಿದ್ದು, 96,450 ರೂ.ಗೆ ತಲುಪಿದೆ. ಮತ್ತೊಂದೆಡೆ, ಎಂಸಿಎಕ್ಸ್‌ನಲ್ಲಿ ಚಿನ್ನದ ಫ್ಯೂಚರ್‌ಗಳು (ಜೂನ್ ವಿತರಣೆ) 10 ಗ್ರಾಂಗೆ 1,703 ರೂ. ಮತ್ತು ಸಾರ್ವಕಾಲಿಕ ಗರಿಷ್ಠ 93,736 ರೂ. ತಲುಪಿದೆ. ಬೆಳ್ಳಿ ಬೆಲೆಯೂ ತೀವ್ರ ಹೆಚ್ಚಳ ಕಂಡಿದೆ.
ಚಿನ್ನದ ಬೆಲೆಯಲ್ಲಿ ತೀವ್ರ ಏರಿಕೆಗೆ ಪ್ರಮುಖ ಹಾಗೂ ಒಂದು ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ವಿಶ್ವದ ದೊಡ್ಡಣ್ಣ ತೆಗೆದುಕೊಂಡ ನಿರ್ಧಾರಗಳು ಈ ಬದಲಾವಣೆಗಳಿಗೆ ಹೊಸ ಮುನ್ನುಡಿ ಬರೆದಿದೆ. ಟ್ರಂಪ್ ಅವರ ಹೊಡೆತದಿಂದ ಷೇರು ಮಾರುಕಟ್ಟೆಗಳು ಕುಸಿಯುತ್ತಿದ್ದರೆ, ಮತ್ತೊಂದೆಡೆ, ಚಿನ್ನದ ಬೆಲೆಗೆ ರೆಕ್ಕೆ ಪುಕ್ಕಗಳು ಸೇರಿಕೊಂಡಿವೆ. ಹೀಗಾಗಿಯೇ ಹಂತ ಹಂತವಾಗಿ ಗಗನಕ್ಕೇರುತ್ತಿದೆ. ಅಮೆರಿಕ ಸರ್ಕಾರ ಗುರುವಾರ ಚೀನಾದ ಮೇಲಿನ ಸುಂಕವನ್ನು ಶೇ. 145ರಷ್ಟು ಹೆಚ್ಚಿಸಿದೆ. ಇದು ಎರಡೂ ದೇಶಗಳ ನಡುವಿನ ವ್ಯಾಪಾರ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಈ ಹಿನ್ನೆಲೆ ಚಿನ್ನದ ಬೆಲೆಗಳು ತೀವ್ರ ಏರಿಕೆಯನ್ನು ದಾಖಲಿಸುತ್ತಿವೆ. ರೂಪಾಯಿ ಬಲಿಷ್ಠವಾಗಿದ್ದರೂ, ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಅಮೆರಿಕ- ಚೀನಾ ನಡುವಿನ ತೀವ್ರಗೊಳ್ಳುತ್ತಿರುವ ಸುಂಕ ಯುದ್ಧದಿಂದಾಗಿ ಚಿನ್ನದ ದರಗಳು ಗಣನೀಯವಾಗಿ ಹೆಚ್ಚುತ್ತಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಸುಂಕ ಯುದ್ಧ ಮತ್ತು ಅಮೆರಿಕದ ಆರ್ಥಿಕತೆಯಲ್ಲಿ ಹಿಂಜರಿತದ ಭಯ ಹೆಚ್ಚುತ್ತಿರುವಂತೆ ಯುಎಸ್ ಡಾಲರ್ ಕೂಡ ಕುಸಿಯುತ್ತಿದೆ.
ಚಿನ್ನದ ಬೆಲೆ ಏರಿಕೆಗೆ ಇದೂ ಒಂದು ಕಾರಣ. ಈ ವರ್ಷದ ಅಂತ್ಯದ ವೇಳೆಗೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1 ಲಕ್ಷ ರೂ. ತಲುಪುವ ಅಂದಾಜಿದೆ. ಮತ್ತೊಂದೆಡೆ, ವಿವಿಧ ಕೇಂದ್ರ ಬ್ಯಾಂಕುಗಳು ಚಿನ್ನದ ಖರೀದಿಯಲ್ಲಿ ಹೆಚ್ಚಳ ಕಂಡಿರುವುದರಿಂದ ಚಿನ್ನದ ಬೆಲೆ ದುಪ್ಪಟ್ಟಾಗುತ್ತಿದೆ ಎಂದು ವಿಶ್ಲೇಷಕರು ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).