ಚೀನಾದಲ್ಲಿ ಮೂರು ಕೋಟಿ ಜನರು ಲಾಕ್​ಡೌನ್

Lockdown
Published on

ಬೀಜಿಂಗ್: ಚೀನಾದಲ್ಲಿ ಒಮಿಕ್ರಾನ್ ಪ್ರಭೇದದ ಹಾವಳಿಯಿಂದ ಕರೊನಾ ಸೋಂಕು ದಿನೇ ದಿನೆ ತೀವ್ರಗೊಳ್ಳುತ್ತಿದ್ದು ವಿವಿಧ ನಗರಗಳಲ್ಲಿ ಸುಮಾರು 3 ಕೋಟಿ ಜನರನ್ನು ಲಾಕ್​ಡೌನ್​ಗೆ ಒಳಪಡಿಸಲಾಗಿದೆ. ದೇಶದಲ್ಲಿ ಮಂಗಳವಾರ ಕರೊನಾ ಸೋಂಕಿನ 5,280 ಹೊಸ ಕೇಸ್​ಗಳು ದೃಢಪಟ್ಟಿದ್ದು ಸೋಮವಾರ ವರದಿಯಾಗಿದ್ದಕ್ಕಿಂತ ದುಪ್ಪಟ್ಟು ಆಗಿದೆ.

‘ಝೀರೋ ಕೋವಿಡ್’ ನೀತಿ ಫಲ ನೀಡದೆ ಸೋಂಕು ಏರಿಕೆಯಾಗುತ್ತಿರುವುದರಿಂದ ಸಾಮೂಹಿಕ ಪರೀಕ್ಷೆಗಳನ್ನು ಪುನರಾರಂಭಿಸಲಾಗಿದೆ. ಒಟ್ಟು 13 ನಗರಗಳಲ್ಲಿ ಸಂಪೂರ್ಣ ಲಾಕ್​ಡೌನ್ ವಿಧಿಸಲಾಗಿದೆ. ಇನ್ನೂ ಹಲವು ಕಡೆ ಭಾಗಶಃ ನಿರ್ಬಂಧ ಜಾರಿಗೊಳಿಸಲಾಗಿದೆ.

ಅಮೆರಿಕದಲ್ಲಿ ಮತ್ತೆ ಏರಿಕೆ?: ಅಮೆರಿಕದಲ್ಲಿ ಕರೊನಾ ಸೋಂಕಿನ ಪ್ರಮಾಣ ಇಳಿಮುಖವಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದ್ದರೂ ವಾಸ್ತವವಾಗಿ ಮತ್ತೆ ಜಾಸ್ತಿಯಾಗುವ ಲಕ್ಷಣ ಗೋಚರಿಸುತ್ತಿರುವುದು ಅಧ್ಯಯನದಿಂದ ತಿಳಿದು ಬಂದಿದೆ. ಅಮೆರಿಕದ ವ್ಯಾಧಿ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ನಡೆಸಿದ ತ್ಯಾಜ್ಯ ನೀರಿನ ಪರೀಕ್ಷೆಯಿಂದ ಮಾರ್ಚ್ 1ರಿಂದ 10ರ ನಡುವೆ ಕೋವಿಡ್ ಸೋಂಕು ಏರಿಕೆಯ ಪ್ರವೃತ್ತಿ ಗೋಚರಿಸಿದೆ ಎಂದು ಬ್ಲೂಮ್​ಗ್ ತಿಳಿಸಿದೆ. ಇದೊಂದು ಎಚ್ಚರಿಕೆ ಗಂಟೆಯಾಗಿದೆ ಎಂದು ವಿಶ್ಲೇಷಿಸಲಾಗಿದ್ದು ಸೋಂಕು ಮತ್ತೆ ಉಲ್ಬಣಗೊಳ್ಳದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.

ದೇಶದಲ್ಲಿ 2,568 ಕೇಸ್: ಭಾರತದಲ್ಲಿ ಮಂಗಳವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ಕರೊನಾ ಸಾಂಕ್ರಾಮಿಕತೆಯ 2,568 ಹೊಸ ಪ್ರಕರಣಗಳು ದೃಢಪಟ್ಟಿವೆ. 97 ರೋಗಿಗಳು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಾವಿನ ಒಟ್ಟು ಸಂಖ್ಯೆ 5,15,974ಕ್ಕೆ ತಲುಪಿದೆ. ದೇಶದಲ್ಲಿ ಕರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 33,917ಕ್ಕೆ ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net