ತಮಿಳುನಾಡಿನಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ; ಎಐಎಡಿಎಂಕೆ ಜಾಗವನ್ನು ದಳಪತಿ ವಿಜಯ್ ಆಕ್ರಮಿಸಿಕೊಳ್ತಾರೆ ; ಮಾಣಿಕ್ಯಂ ಟ್ಯಾಗೋರ್| Manickam Tagore

Untitled design (91)
Published on

Manickam Tagore: ಮುಂಬರುವ 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ. ನಟ ದಳಪತಿ ವಿಜಯ್ ಅವರ ಪಕ್ಷ ಟಿವಿಕೆ, ಎಐಎಡಿಎಂಕೆ ಜಾಗವನ್ನು ವೇಗವಾಗಿ ಆಕ್ರಮಿಸಿಕೊಳ್ಳುತ್ತಿದೆ ಎಂದು ಬುಧವಾರ (ಸೆ.24) ಕಾಂಗ್ರೆಸ್ ನಾಯಕ, ಸಂಸದ ಮಾಣಿಕ್ಯಂ ಟ್ಯಾಗೋರ್ ಹೇಳಿದ್ದಾರೆ.

ಎನ್​​ಡಿಟಿವಿ ಜೊತೆಗಿನ ಸಂದರ್ಶನದಲ್ಲಿ  ಮಾತನಾಡಿರುವ ಅವರು, ನಟ ವಿಜಯ್ ಅವರ ಟಿವಿಕೆ ಒಂದು ಶಕ್ತಿಯಾಗುತ್ತಿದೆ. 2026ರ ತಮಿಳುನಾಡು ಚುನಾವಣೆಯಲ್ಲಿ ಕಠಿಣ ತ್ರಿಕೋನ ಹೋರಾಟ ನಡೆಯಲಿದೆ. ಟಿವಿಕೆ ಬೆಳವಣಿಗೆ ಎಐಎಡಿಎಂಕೆಗೆ ಹೆಚ್ಚು ಬೆದರಿಕೆಯಾಗಿದೆ. ಬಹಳ ವೇಗವಾಗಿ ಅವರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದೆ. ಆದರೆ ನಮ್ಮ ಆಡಳಿತರೂಢ ಡಿಎಂಕೆ ಮೈತ್ರಿಕೂಟಕ್ಕೆ ಯಾವುದೇ ಪರಿಣಾಮವಿಲ್ಲ ಎಂದು ತಿಳಿಸಿದ್ದಾರೆ.

ವಿಜಯ್ ಅವರ ಆಲೋಚನೆ ನೋಡುತ್ತಿದ್ದರೆ, ಟಿವಿಕೆ ವಿರೋಧ ಪಕ್ಷದ ಸ್ಥಾನವನ್ನು ತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತೇನೆ. ಬಿಜೆಪಿಯ ರಿಮೋಟ್ ಕಂಟ್ರೋಲ್ ನಾಯಕತ್ವದಿಂದಾಗಿ ಎಐಎಡಿಎಂಕೆ ಎಡವುತ್ತಿದೆ. ಅಲ್ಲದೇ ಬಿಜೆಪಿಯೊಂದಿಗೆ ಹೋಗುವುದನ್ನು ಅದರ ಮತದಾರರು ಸ್ವೀಕರಿಸುವುದಿಲ್ಲ. ಒಂದು ವೇಳೆ ಹೀಗೆ ಮುಂದುವರೆದ್ರೆ ಮುಂದಿನ ಚುನಾವಣೆ ಡಿಎಂಕೆ-ಕಾಂಗ್ರೆಸ್​ನ ಇಂಡಿಯಾ ಮೈತ್ರಿಕೂಟ ಮತ್ತು ಟಿವಿಕೆ ನಡುವೆ ಹೋರಾಟ ಇರುತ್ತದೆ. ಎಐಎಡಿಎಂಕೆ, ಬಿಜೆಪಿ ಹೀನಾಯವಾಗಿ ಸೋಲುತ್ತವೆ ಎಂದು ಹೇಳಿದ್ದಾರೆ.

ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಹೆಚ್ಚಿನ ಸೀಟು ಪಡೆಯುವ ಬಗ್ಗೆ ಸುಳಿವು ನೀಡಿರುವ ಟ್ಯಾಗೋರ್, ಮೈತ್ರಿಕೂಟ ಮತ್ತು ಮೈತ್ರಿ ಹಿತಾಸಕ್ತಿಗಳಿಗಾಗಿ ಕಾಂಗ್ರೆಸ್ ಯಾವಾಗಲೂ ತ್ಯಾಗ ಮಾಡಿದೆ. ಆದರೆ ಪಕ್ಷವು 2026ರಲ್ಲಿ 25 ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಬಯಸುತ್ತದೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net