

ಸಾಗರ: ಕೇಂದ್ರ ಸರ್ಕಾರ ರಸ್ತೆ ಅಭಿವೃದ್ಧಿಗಾಗಿ ರಾಜ್ಯಕ್ಕೆ 5,756 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಪೈಕಿ 2623 ಕೋಟಿ ರೂ. ಶಿವಮೊಗ್ಗ ವಿಭಾಗಕ್ಕೆ ಬಂದಿದೆ. ಇದರಲ್ಲಿ ಶೇ.70ರಷ್ಟನ್ನು ಸಾಗರ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಉಪಯೋಗಿಸಲಾಗುತ್ತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಸಾಗರದಲ್ಲಿ ಬುಧವಾರ ಬಿಜೆಪಿಯಿಂದ ಆಯೋಜಿಸಿದ್ದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಕೃತಜ್ಞತಾ ಸಲ್ಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆನಂದಪುರದಿಂದ ಚೂರಿಕಟ್ಟೆವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 600 ಕೋಟಿ ರೂ., ಸಾಗರದ ಶಿವಪ್ಪನಾಯಕ ವೃತ್ತದಿಂದ ಮರಕುಟಿಕವರೆಗೆ ರಾಷ್ಟ್ರೀಯ ಹೆದ್ದಾರಿ 369ಇ ನಿರ್ಮಾಣಕ್ಕೆ 400 ಕೋಟಿ ರೂ. ಮಂಜೂರಾಗಿದೆ. ಹೊಸನಗರ- ಆನಂದಪುರ, ಶಿಕಾರಿಪುರ, ರಾಣಿಬೆನ್ನೂರು ರಸ್ತೆ ಅಭಿವೃದ್ಧಿಗೆ 900 ಕೋಟಿ ರೂ. ಅನುದಾನ ಬಂದಿದೆ ಎಂದು ಮಾಹಿತಿ ನೀಡಿದರು.
ರಾಘವೇಂದ್ರ, ಹಾಲಪ್ಪ ಅವರ ಮುಖ ನೋಡಿ ಮತ ನೀಡಿಲ್ಲ. ಮೋದಿ ಅವರ ಮುಖ ನೋಡಿ ಮತ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ ನೀಡಿದ್ದಾರೆ. ನಮ್ಮನ್ನು ಒಪ್ಪಿಕೊಳ್ಳದಿದ್ದರೂ ಮೋದಿ ಅವರನ್ನಾದರೂ ಮತದಾರರು ಒಪ್ಪಿದ್ದಾರಲ್ಲ ಎನ್ನುವುದೇ ಸಂತೋಷದ ಸಂಗತಿ ಎಂದು ಟಾಂಗ್ ನೀಡಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲು ಹೆಚ್ಚಿನ ಶ್ರಮ ಹಾಕಲಾಗುತ್ತದೆ. ರಾಜ್ಯ ಸರ್ಕಾರ ತಕ್ಷಣ ಕೇಂದ್ರಕ್ಕೆ ಅಥವಾ ಸುಪ್ರೀಂ ಕೋರ್ಟ್‌ಗೆ ಪ್ರಸ್ತಾವನೆ ಸಲ್ಲಿಸಬೇಕು. ತಾಳಗುಪ್ಪ-ಹೊನ್ನಾವರ, ಕೊಂಕಣ ರೈಲ್ವೆ ಮಾರ್ಗ ವಿಸ್ತರಣೆಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಗ್ಯಾರಂಟಿಯಿಂದ ಹೊಟ್ಟೆತುಂಬಿಕೊಂಡ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ ಎಂದು ಉಸ್ತುವಾರಿ ಸಚಿವರು ಶಿವಮೊಗ್ಗದಲ್ಲಿ ಅಹಂಕಾರದ ಮಾತುಗಳನ್ನಾಡಿದ್ದಾರೆ. ಸರ್ಕಾರದ ಹಣವನ್ನು ಗ್ಯಾರಂಟಿ ಯೋಜನೆಗೆ ಉಪಯೋಗಿಸಲಾಗಿದೆ. ಅವರ ಹೊಟ್ಟೆ ತುಂಬಿದೆಯೋ, ಬಡವಾಗಿದೆಯೋ ಎನ್ನುವ ಚಿಂತೆ ನಿಮಗೆ ಬೇಡ. ಚುನಾವಣೆ ಸಂದರ್ಭ ಸಾಕಷ್ಟು ಮಾತುಗಳನ್ನು ಹೇಳಿದ್ದೀರಿ. ಇನ್ನಾದರೂ ಅದನೆಲ್ಲ ನಿಲ್ಲಿಸಿ ಅಭಿವೃದ್ಧಿ ಬಗ್ಗೆ ಗಮನ ಹರಿಸೋಣ ಎಂದರು.
ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರ ಬಿಜೆಪಿ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ಗ್ರಾಮಾಂತರ ಅಧ್ಯಕ್ಷ ದೇವೇಂದ್ರಪ್ಪ, ಪ್ರಮುಖರಾದ ಪ್ರಸನ್ನ ಕೆರೆಕೈ, ಡಾ. ರಾಜನಂದಿನಿ ಕಾಗೋಡು, ಮಲ್ಲಿಕಾರ್ಜುನ ಹಕ್ರೆ, ಮಧುರಾ ಶಿವಾನಂದ್, ವಿ.ಮಹೇಶ್, ಪ್ರಶಾಂತ್, ಗಾಯತ್ರಿ ಮಹೇಶ್, ಮಂಗಳಾ, ಆರ್.ಶ್ರೀನಿವಾಸ್, ಭರ್ಮಪ್ಪ ಇತರರಿದ್ದರು.