ಮನೆಯಲ್ಲಿದ್ದ ಡ್ರೆಸ್ಸಿಂಗ್ ಟೇಬಲ್ ಕೆಳಗೆ 24 ನಾಗರ ಹಾವು, 60 ಮೊಟ್ಟೆ ಪತ್ತೆ!

snake
Published on

ಬಿಹಾರ: ಹಾವು ಕಂಡರೆ ಭಯದಿಂದ ದೂರ ಓಡಿ ಹೋಗುತ್ತಾರೆ. ನಾಗರಹಾವಿನಂತಿದ್ದರೆ ಹಾವು ಇರುವ ಸುತ್ತಮುತ್ತಲು ಹೋಗಲು ಹೆದರುತ್ತೇವೆ. ಇದು ಅತ್ಯಂತ ವಿಷಕಾರಿ ಹಾವು. ಬಿಹಾರದ ಬಾಘಾ ಜಿಲ್ಲೆಯ ಮಧುಬನಿ ಗ್ರಾಮ ಪಂಚಾಯಿತಿಯಲ್ಲಿ ಇಂತಹದ್ದೇ ಘಟನೆ ನಡೆದಿದೆ.

ಗ್ರಾಮದ ಮದನ್ ಚೌಧರಿ ಎಂಬುವರು ತಮ್ಮ ಮನೆಯ ಮೆಟ್ಟಿಲುಗಳ ಕೆಳಗೆ ಡ್ರೆಸ್ಸಿಂಗ್ ಟೇಬಲ್ ಇಟ್ಟುಕೊಂಡಿದ್ದರು. ಮನೆಯ ಮಕ್ಕಳು ಮೆಟ್ಟಿಲುಗಳ ಬಳಿ ಆಟವಾಡುತ್ತಿದ್ದಾಗ ಹಾವು ಹಾದು ಹೋಗಿತ್ತು. ಮಕ್ಕಳು ಒಮ್ಮೆಲೆ ಕಿರುಚಿದರು. ಮಕ್ಕಳ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಆಗಮಿಸಿದರು. ಕುಟುಂಬಸ್ಥರು ಡ್ರೆಸ್ಸಿಂಗ್ ಟೇಬಲ್ ಬಳಿ ಬಂದು ನೋಡಿದಾಗ ನಾಗರಹಾವು ಕಾಣಿಸಿಕೊಂಡಿದೆ.

ಡ್ರೆಸ್ಸಿಂಗ್ ಟೇಬಲ್ ಅನ್ನು ಸ್ವಲ್ಪ ಸರಿಸಿದರು. ಇನ್ನು ನಾಲ್ಕು ಹಾವುಗಳು ಕಂಡು ಬಂದ ಕೂಡಲೇ ಮನೆಯವರು ಹಾಗೂ ಸ್ಥಳೀಯರು ಹಾವುಗಳನ್ನು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಡ್ರೆಸ್ಸಿಂಗ್ ಟೇಬಲ್ ಕೆಳಗೆ ನೋಡಿದಾಗ 24 ನಾಗರ ಹಾವುಗಳು ಕಂಡವು. ಹಾವುಗಳ ಜತೆಗೆ 60 ಮೊಟ್ಟೆಗಳು ಪತ್ತೆಯಾಗಿವೆ. ಹಾವು ಮತ್ತು ಮೊಟ್ಟೆಗಳನ್ನು ಚೀಲದಲ್ಲಿ ಹಾಕಿದ ಉರಗ ತಜ್ಞ ಅವುಗಳನ್ನು ಕಾಡಿನ ಅಂಚಿನಲ್ಲಿ ಬಿಟ್ಟು ಹೋಗಿ ಬಿಟ್ಟಿದ್ದಾರೆ.

ಈ ಘಟನೆಯಿಂದ ಕುಟುಂಬಸ್ಥರ ಜತೆಗೆ ಸುತ್ತಮುತ್ತಲಿನವರೂ ಭಯಭೀತರಾಗಿದ್ದಾರೆ. ಪ್ರತಿದಿನ ಆ ಭಾಗದಲ್ಲಿ ಮಕ್ಕಳು ಆಟವಾಡುತ್ತಿದ್ದು, ಅದೃಷ್ಟವಶಾತ್ ಮಕ್ಕಳಿಗೆ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಮನೆಯ ಮಾಲೀಕ ಮದನ್ ಚೌಧರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net