22,526 ಕೋಟಿ ರೂಪಾಯಿ ಬಳಸಿಲ್ಲ; ಬಜೆಟ್​ನಲ್ಲಿ ಕಾದಿಟ್ಟರೂ ಬಳಕೆಗೆ ತಾತ್ಸಾರ: ಸಿಎಜಿ ವರದಿ ಬಹಿರಂಗ

State
Published on

ಬೆಂಗಳೂರು: ರಾಜ್ಯ ಬಜೆಟ್​ನಲ್ಲಿ ಕಾದಿರಿಸಿದ ಅನುದಾನದ ಪೈಕಿ 22,526.24 ಕೋಟಿ ರೂ. (ಶೇ.8.49) ಅನುದಾನ ಬಳಕೆಯೇ ಆಗಿಲ್ಲವೆಂಬ ಮಹತ್ವದ ಅಂಶವನ್ನು ಲೆಕ್ಕನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಬಹಿರಂಗಪಡಿಸಿದೆ. ಮಾರ್ಚ್ 2021ರ ಕೊನೆಗೊಂಡ ವರ್ಷಕ್ಕೆ ಸಂಬಂಧಿತ ಸರ್ಕಾರದ ಹಣಕಾಸು ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯನ್ನು ವಿಧಾನಪರಿಷತ್​ನಲ್ಲಿ ಬುಧವಾರ ಮಂಡಿಸಲಾಯಿತು. ಈ ವರದಿ ಪ್ರಕಾರ, 2020-21ರ ಆಯವ್ಯಯದಲ್ಲಿ ಅವಕಾಶ ಕಲ್ಪಿಸಿದ್ದ 2,65,220.73 ಕೋಟಿ ರೂ.ಗಳಿಗೆ ಪ್ರತಿಯಾಗಿ 2,42,694.49 ಕೋಟಿ ರೂ. ವೆಚ್ಚ ಭರಿಸಿದ್ದು, 22,526.24 ಕೋಟಿ ರೂ. ಬಳಕೆಯಾಗಿಲ್ಲ. ಉಳಿದ ಹಣದಲ್ಲಿ ಶೇ.80 ಅಧ್ಯರ್ಪಣೆ ಮಾಡಿಲ್ಲ. ಹಂಚಿಕೆ ಮತ್ತು ವೆಚ್ಚಗಳ ನಡುವಿನ ವ್ಯತ್ಯಾಸಗಳಿಗೆ ನಿಯಂತ್ರಣಾಧಿಕಾರಿಗಳು ಪ್ರಧಾನ ಮಹಾಲೇಖಪಾಲರಿಗೆ ವಿವರಣೆ ಸಲ್ಲಿಸಿಲ್ಲ. ಬಳಕೆಯಾಗದ ಮೊತ್ತದಲ್ಲಿ ಮಹಿಳೆಯರು ಮತ್ತು ಮಕ್ಕಳ ಯೋಜನೆ, ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಿದ ಅನುದಾನವೂ ಸೇರಿಸಿಕೊಂಡಿದೆ. ಮಕ್ಕಳ ಆಯವ್ಯಯ ಸಿದ್ಧಪಡಿಸಲು ನಿರ್ಧರಿಸಿದ ಪ್ರಾರಂಭಿಕ ಆರ್ಥಿಕ ವರ್ಷ (2020-21) ದಲ್ಲಿ ಮಕ್ಕಳ ಕೇಂದ್ರಿತ ಯೋಜನೆ/ ಕಾರ್ಯಕ್ರಮಗಳಿಗೆ 51,084.28 ಕೋಟಿ ರೂ. ಹಂಚಿಕೆ ಮಾಡಿದ್ದು, 5,524.51 ಕೋಟಿ ರೂ. (ಶೇ.11) ಬಳಸಿಲ್ಲ. ಅಲ್ಲದೆ ಮಹಿಳಾ ನಿರ್ದಿಷ್ಟ ಯೋಜನೆಗಳಿಗೆ ಮೀಸಲಿಟ್ಟ ಒಟ್ಟು ಹಂಚಿಕೆ ಪಾಲು ಇಳಿಮುಖವಾಗಿರುವುದನ್ನು ವರದಿ ಎತ್ತಿ ತೋರಿಸಿದೆ. ಜತೆಗೆ 10 ಅನುದಾನಗಳಡಿ 5,128.70 ಕೋಟಿ ರೂ. ಹೆಚ್ಚುವರಿ ವೆಚ್ಚಕ್ಕೆ ಶಾಸನಸಭೆಯ ಅನುಮೋದನೆ ಪಡೆಯದೆ 36 ಕಾರ್ಯಕಾರಿ ಆದೇಶಗಳನ್ನು ಹೊರಡಿಸಿದ್ದು, ನಂತರ ಪೂರಕ ಬೇಡಿಕೆ ಗಳ ಮೂಲಕ ಕ್ರಮಬದ್ಧಗೊಳಿಸಲಾಗಿದೆ. ಶಾಸನಸಭೆ ಅನುಮೋದನೆಯಿಲ್ಲದೆ ಹೆಚ್ಚುವರಿ ವೆಚ್ಚ ಮಾಡಿದ ಕೆಲಸಗಳು ತುರ್ತು ಅಗತ್ಯದವುಗಳಾಗಿದ್ದಿಲ್ಲ ಎಂದು ಸಿಎಜಿ ಬೊಟ್ಟು ಮಾಡಿದೆ.

ಸಂಗ್ರಹ ಖೋತಾ, ವೆಚ್ಚ ಏರಿಕೆ: ಜಿಎಸ್​ಟಿ ಪರಿಹಾರ, ರಾಜ್ಯದ ವಾಸ್ತವಿಕ ತೆರಿಗೆ ಸೇರಿ ಒಟ್ಟು 69,592.49 ಕೋಟಿ ರೂ. ಸಂಗ್ರಹ ನಿರೀಕ್ಷಿಸಿದ್ದರೆ, ಒಟ್ಟಾರೆ 60,660.32 ಕೋಟಿ ರೂ. ಸಂದಾಯವಾಗಿದೆ. ಇದರಿಂದ 8,932.17 ಕೋಟಿ ರೂ. ಆದಾಯ ಖೋತಾ ಆಗಿದೆ. ವಿತ್ತೀಯ ಹೊಣೆಗಾರಿಕೆ ಮಿತಿ ಶೇ.3.7 ದಾಟಿಲ್ಲ, ರಾಜ್ಯದ ನಿವ್ವಳ ಆಂತರಿಕ ಉತ್ಪನ್ನ (ಜಿಎಸ್​ಡಿಪಿ)ದ ಶೇ.25 ಮಿತಿಯೊಳಗೆ ಸಾಲದ ಹೊರೆಯಿದೆ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ. ಆದರೆ ಸಾಲ ಮತ್ತು ಮುಂಗಡಗಳು ಒಳಗೊಂಡು ಬಂಡವಾಳ ವೆಚ್ಚದ ಪಾಲು ಹಿಂದಿನ ವರ್ಷಕ್ಕೆ ಹೋಲಿಸಿದರೆ, ಶೇ.2.93 ಹೆಚ್ಚಿದೆ. ಕರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್​ಡೌನ್​ನಿಂದ ರಾಜಸ್ವ ಸಂಗ್ರಹ ಕುಸಿತವಾಗಿದ್ದರೆ, ಸಂಬಳ, ಪಿಂಚಣಿ, ಸಬ್ಸಿಡಿ, ಸಾಲದ ಮೇಲಿನ ಬಡ್ಡಿ (18,627 ಕೋಟಿ ರೂ.) ಸೇರಿ ಬದ್ಧತಾ ವೆಚ್ಚವು ಶೇ.85 ರಷ್ಟಾಗಿದ್ದರತ್ತ ವರದಿ ಗಮನಸೆಳೆದಿದೆ.

ಹೂಡಿಕೆ ಪ್ರತಿಫಲ ಅತ್ಯಲ್ಪ: ನಿಷ್ಕ್ರಿಯ, ನಷ್ಟದಲ್ಲಿ ಇದ್ದವು ಒಳಗೊಂಡು 89 ಸರ್ಕಾರಿ ಕಂಪನಿಗಳಿಗೆ 60,731 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಲಭಿಸಿದ ಪ್ರತಿಫಲ 80.70 ಕೋಟಿ ರೂ. ಮಾತ್ರ. ಎಸ್ಕಾಂ, ನೀರಾವರಿ, ಸಾರಿಗೆ ನಿಗಮಗಳು ಸೇರಿ ನಷ್ಟದಲ್ಲಿರುವ ಕಂಪನಿಗಳಿಗೆ 42,119.95 ಕೋಟಿ ರೂ. ಹೂಡಿಕೆ ಮಾಡಿದ್ದು, 16,987.92 ಕೋಟಿ ರೂ. ಸಂಚಿತ ನಷ್ಟವಾಗಿದೆ. ಇಂಧನ, ನೀರಾವರಿ ವಿಭಾಗಗಳು ನಷ್ಟ ಅನುಭವಿಸುತ್ತಿದ್ದರೂ ಮೂಲ ಸವಲತ್ತು, ಉದ್ಯೋಗ ಸೃಷ್ಟಿಗಾಗಿ ಈ ಹೂಡಿಕೆ ಅನಿವಾರ್ಯವೆಂದು ಆರ್ಥಿಕ ಇಲಾಖೆ ಸಮಜಾಯಿಷಿ ನೀಡಿದೆ.

ಶಿಕ್ಷಣ, ಆರೋಗ್ಯ ವೆಚ್ಚ ಕಡಿತ: ಸಾಮಾಜಿಕ ಸೇವೆ ಮತ್ತು ಆರ್ಥಿಕ ಮೂಲಸೌಕರ್ಯಕ್ಕೆ ಸಂಬಂಧಿಸಿದ ವೆಚ್ಚ ಜವಾಬ್ದಾರಿ ಹೆಚ್ಚಾಗಿ ರಾಜ್ಯದ ವಿಷಯ ಗಳಾಗಿವೆ. ಆರೋಗ್ಯ, ಶಿಕ್ಷಣ ಇತ್ಯಾದಿ ಪ್ರಮುಖ ಸಾಮಾಜಿಕ ಸೇವೆಗಳ ವೆಚ್ಚ ಹೆಚ್ಚಿಸಿದಷ್ಟು ಮಾನವ ಅಭಿವೃದ್ಧಿಮಟ್ಟ ಹೆಚ್ಚುತ್ತದೆ. ಅಲ್ಲದೆ, ಈ ಅಂಗಗಳ ಅನುಪಾತವು ಹೆಚ್ಚಾಗಿದ್ದರೆ, ಗುಣಮಟ್ಟವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಸಾಮಾಜಿಕ ಸೇವೆಗಳಿಗಿಂತ ಸಾಮಾನ್ಯ ಸೇವೆಗಳಿಗೆ ರಾಜ್ಯ ಹೆಚ್ಚಿನ ವೆಚ್ಚ ಮಾಡಿರುವುದನ್ನು ವರದಿ ಬಹಿರಂಗಪಡಿಸಿದ್ದು, ನೆರೆಯ ರಾಜ್ಯಗಳ ಜತೆಗೆ ತುಲನೆ ಮಾಡಿದೆ. ಶಿಕ್ಷಣಕ್ಕೆ ಸಾಮಾನ್ಯ ವರ್ಗಗಳ ರಾಜ್ಯಗಳು ಶೇ.15, ಕೇರಳ- ಶೇ.11.87, ತಮಿಳುನಾಡು- ಶೇ.13.97, ಆಂಧ್ರಪ್ರದೇಶ- ಶೇ.13.83 ತೆಲಂಗಾಣ- ಶೇ.8.36, ಮಹಾರಾಷ್ಟ್ರ- ಶೇ.17.98 ಮತ್ತು ಮಧ್ಯಪ್ರದೇಶ- ಶೇ.14.54 ವ್ಯಯಿಸಿದ್ದರೆ ಕರ್ನಾಟಕ ಶೇ.11.37 ವೆಚ್ಚ ಮಾಡಿದೆ. ಅದೇ ರೀತಿ ಆರೋಗ್ಯ ಕ್ಷೇತ್ರಕ್ಕೆ ಸಾಮಾನ್ಯ ರಾಜ್ಯಗಳು ಶೇ.6.74, ಕೇರಳ- ಶೇ.6.41, ತಮಿಳುನಾಡು- ಶೇ.6.36, ಆಂಧ್ರಪ್ರದೇಶ- ಶೇ.5.49, ತೆಲಂಗಾಣ- ಶೇ.4.24, ಮಹಾರಾಷ್ಟ್ರ- ಶೇ.4.99, ಮಧ್ಯಪ್ರದೇಶ- ಶೇ.4.93 ವೆಚ್ಚ ಮಾಡಿದ್ದರೆ, ಕರ್ನಾಟಕ ಶೇ.5.29 ವ್ಯಯಿಸಿದೆ.

ತೆವಳುತ್ತಿರುವ ಯೋಜನೆಗಳು: ರಾಜ್ಯದಲ್ಲಿ ಒಟ್ಟು 1,133 ಯೋಜನೆಗಳು ಅಪೂರ್ಣವಾಗಿವೆ. ಇವುಗಳ ಒಟ್ಟಾರೆ ಆರಂಭಿಕ ಅಂದಾಜು 6,469.37 ಕೋಟಿ ರೂ.ಗಳಾಗಿದ್ದರೆ, 3628.15 ಕೋಟಿ ರೂ. ವೆಚ್ಚವಾಗಿದೆ. ವಿಳಂಬದ ಪೈಕಿ 55 ಯೋಜನೆಗಳು ಐದು ವರ್ಷಕ್ಕಿಂತ ಮೇಲ್ಪಟ್ಟು, 729 ಒಂದು ವರ್ಷಕ್ಕೆ ಮೇಲ್ಪಟ್ಟು, 349 ಯೋಜನೆಗಳು ಒಂದು ವರ್ಷದೊಳಗಿನವರು. ಲೋಕೋಪಯೋಗಿ, ಜಲಸಂಪನ್ಮೂಲ ಇಲಾಖೆಗಳು ವಿಳಂಬಕ್ಕೆ ಕಾರಣಗಳನ್ನು ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net