

ತರೀಕೆರೆ: 2024-25ನೇ ಸಾಲಿನಲ್ಲಿ ಸಂಘ 21 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಬಿ.ರಾಜಪ್ಪ ಹೇಳಿದರು.
ಅಜ್ಜಂಪುರ ಪಟ್ಟಣದ ಶ್ರೀಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ವಾರ್ಷಿಕ 46 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸಿರುವ ಸಂಘಕ್ಕೆ ನೂತನವಾಗಿ ಐದು ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸ್ಥಾಪನೆಯಾಗಿ ಎರಡು ದಶಕ ಪೂರೈಸಿರುವ ಸಂಘ ಸ್ವಂತ ಕಟ್ಟಡ ಹೊಂದಿರುವುದು ಮಾತ್ರವಲ್ಲ, ಹೆಚ್ಚುವರಿ ಮಳಿಗೆಗಳನ್ನು ಬಾಡಿಗೆ ನೀಡಿ ಲಾಭ ಕಂಡುಕೊಳ್ಳುತ್ತಿದೆ ಎಂದರು.
ಷೇರುದಾರರ ಸಹಕಾರದಿಂದ ಸಂಘ ಪ್ರಗತಿಯತ್ತ ದಾಪುಗಾಲಿಟ್ಟಿದ್ದು ನಿರ್ದೇಶಕರು ಹಾಗೂ ಸಿಬ್ಬಂದಿ ಬದ್ಧತೆಯಿಂದ ಕಾರ್ಯನಿರ್ವಹಿಸಿ ಸಂಘದ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ ಷೇರುದಾರರ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕರಿಸಲಾಯಿತು.
ಉಪಾಧ್ಯಕ್ಷ ಎಂ.ಎನ್.ಸಿದ್ದರಾಮಪ್ಪ, ನಿರ್ದೇಶಕರಾದ ಎಂ.ಎನ್.ಶಿವರಾಜ್, ಎಸ್.ಬಿ.ಆನಂದಪ್ಪ, ಎಸ್.ಈ.ಉಮೇಶ್, ಎಸ್.ಜೆ.ಶಾಂತಕುಮಾರ್, ಎ.ಜಿ.ಮಲ್ಲಿಕಾರ್ಜುನ, ಎಂ.ಸಿ.ನಾಗರಾಜ್, ಕಮಲಮ್ಮ, ಎಂ.ಸಿ.ಪ್ರೇಮಾ, ಎನ್.ನಾಗೇಂದ್ರಪ್ಪ, ಸಿಇಒ ನಾಗರಾಜ್ ಮತ್ತಿತರರಿದ್ದರು.