

ಕರೊನಾ ಬೇರೆಲ್ಲ ಚಟುವಟಿಕೆಗಳನ್ನು ಥಂಡಾ ಹೊಡೆಸಿದರೂ ರಾಜಕೀಯ ಹಗ್ಗ-ಜಗ್ಗಾಟಗಳಿಗೇನೂ ಕೊರತೆ ಇರಲಿಲ್ಲ. ಸುರಕ್ಷಾ ಕ್ರಮಗಳೊಂದಿಗೆ ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದವು. ಅಂಥ ಚೇತರಿಕೆ ಕಾಣದ ಕಾಂಗ್ರೆಸ್, ಆಂತರಿಕ ಸಮಸ್ಯೆಗಳಿಗೂ ಸಾಕ್ಷಿಯಾಯಿತು. ಬಿಜೆಪಿ ಮತ್ತಷ್ಟು ಪ್ರದೇಶಗಳಿಗೆ ವಿಸ್ತರಣೆಗೊಂಡಿತು. ಬಿಹಾರದ ಗೆಲುವು ಎನ್ಡಿಎ ವಿಶ್ವಾಸ ಹೆಚ್ಚಿಸಿತು.
ಬಿಜೆಪಿ 2019ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿ ಬಂದ ಉತ್ಸಾಹದಲ್ಲೇ 2020ರಲ್ಲಿ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಎದುರಿಸಿತು. ಬಿಹಾರದಲ್ಲಿ ‘ದೊಡ್ಡಣ್ಣ’ನಾಗಿ ಬಡ್ತಿ ಪಡೆದು, ಮೇಲುಗೈ ಸಾಧಿಸಿತು. ಮಧ್ಯಪ್ರದೇಶದಲ್ಲಿ ಮರಳಿ ಅಧಿಕಾರಕ್ಕೆ ಬಂದಿತು. ಹೈದರಾಬಾದ್ ಮಹಾನಗರಪಾಲಿಕೆ ಚುನಾವಣೆಯನ್ನೂ ಪ್ರತಿಷ್ಠೆಯಾಗಿ ಸ್ವೀಕರಿಸಿ, ಅಬ್ಬರದ ಪ್ರಚಾರ ನಡೆಸಿತು. ಪರಿಣಾಮ, ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿತು. ನಟಿಯರಾದ ಖುಷ್ಬೂ, ವಿಜಯಶಾಂತಿ ಕಮಲಪಾಳಯ ಸೇರಿದರು.
2019ರ ಸೋಲಿನ ಆಘಾತದಿಂದ ಕಾಂಗ್ರೆಸ್ ಇನ್ನೂ ಹೊರಬಂದಿಲ್ಲ. ನಾಯಕತ್ವ ಬದಲಾವಣೆ ಕೂಗು ಪಕ್ಷದೊಳಗೇ ವ್ಯಾಪಕವಾಗುತ್ತಿದ್ದು, ಹಿರಿಯ ನಾಯಕರು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ ಪತ್ರ ಭಾರಿ ವಿವಾದ ಸೃಷ್ಟಿಸಿತು. ಕೆಲ ರಾಜ್ಯಗಳ ಸಂಘಟನೆಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿದರೂ, ಕಾಂಗ್ರೆಸ್ ಪುಟಿದೇಳಲು ಹರಸಾಹಸ ಪಡುತ್ತಿದೆ.
ಗುಜರಾತ್, ಮಧ್ಯಪ್ರದೇಶ, ಕರ್ನಾಟಕದಲ್ಲಿ ಹಲವು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಹಿಡಿತ ಸಾಧಿಸಿತು, ಮಹಾರಾಷ್ಟ್ರದಲ್ಲಿ ಮುಗ್ಗರಿಸಿತು. ಒಟ್ಟಾರೆ ವರ್ಷವನ್ನು ಅವಲೋಕಿಸಿದರೆ ಬಿಜೆಪಿಯ ಸಂಘಟನಾ ಬೇರು ಮತ್ತಷ್ಟು ವಿಸ್ತರಣೆಯಾಗಿದ್ದರೆ, ಕಾಂಗ್ರೆಸ್ ಹಾನಿ ಅನುಭವಿಸಿದೆ. ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಮುಂದುವರಿದಿದೆ.
ಸುಸ್ತಾದ ಸಚಿನ್: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿದರೂ, ನಿರ್ಧಾರದಿಂದ ಹಿಂದೆ ಸರಿದರು. ಹಲವು ದಿನಗಳ ಕಾಲ ನಡೆದ ಬಿಕ್ಕಟ್ಟಿನ ವೇಳೆ ಕೇಂದ್ರ ನಾಯಕರು ಮಧ್ಯಪ್ರವೇಶಿಸಿ ರಾಜಿ, ಸಂಧಾನ ಮಾಡಿದರು. ಅದರ ಬೆನ್ನಲ್ಲೇ, ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಸಚಿನ್ ದೈಹಿಕವಾಗಿಯೂ ಬಳಲಿದರು.
ಕೇಜ್ರಿ ಹವಾ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತೆ ಸ್ಪಷ್ಟ ಬಹುಮತ ಪಡೆದುಕೊಂಡಿತು. ಎಎಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಬಿಜೆಪಿ ತಂತ್ರಗಳು ಫಲ ನೀಡಲಿಲ್ಲ. ಅರವಿಂದ ಕೇಜ್ರಿವಾಲ್ 3ನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಫೆಬ್ರವರಿ ಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಮಧ್ಯಪ್ರದೇಶದ ಪ್ರಭಾವಿ ಧುರೀಣ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ನಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಬಂಡಾಯವೆದ್ದರು. ಬೆಂಬಲಿತ ಶಾಸಕರೊಂದಿಗೆ ಸಿಂಧಿಯಾ ಬಿಜೆಪಿ ಸೇರಿದ 15 ತಿಂಗಳ ನಂತರ ಬಿಜೆಪಿ ಅಧಿಕಾರಕ್ಕೆ ಮರಳಿತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ತರುವ ಮೂಲಕ, ಶಿವರಾಜ್ ಸಿಂಗ್ ಚೌಹಾಣ್ ಕುರ್ಚಿ ಭದ್ರವಾಯಿತು. ಸಿಂಧಿಯಾ ಸದ್ಯ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದು, ಸಂಪುಟ ಸೇರುವ ಸಾಧ್ಯತೆ ಇದೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ 2021ರಲ್ಲಿ ನಡೆಯಲಿದ್ದರೂ, ರಾಜಕೀಯ ಜಿದ್ದಾಜಿದ್ದಿ ಮಾತ್ರ ಹಲವು ತಿಂಗಳು ಮೊದಲೇ ಆರಂಭವಾಯಿತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಸಂಘರ್ಷವನ್ನೇ ಸಾರಿದ್ದು, ಅಸಹಕಾರ ನೀತಿ ಅನುಸರಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ರಾಜ್ಯದಲ್ಲಿ ಪಡೆದ ಸ್ಥಾನಗಳಿಂದ ಉತ್ಸಾಹ ಹೆಚ್ಚಿಸಿಕೊಂಡಿದ್ದು, ಅಲ್ಲಿ ಅಧಿಕಾರಕ್ಕೆ ಬರಲು ಶ್ರಮಿಸುತ್ತಿದೆ. ಗೃಹ ಸಚಿವ ಅಮಿತ್ ಷಾ ಈಗಾಗಲೇ ಎರಡು ಸುತ್ತಿನ ಪ್ರವಾಸ ಕೈಗೊಂಡಿದ್ದು, ಮಮತಾ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದ ಸುವೇಂದು ಅಧಿಕಾರಿ ಸಮೇತ ಕೆಲ ಹಾಲಿ ಶಾಸಕರು ಕಮಲ ಪಾಳಯ ಸೇರಿದ್ದಾರೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಅವರ ಬೆಂಗಾವಲು ಪಡೆ ಮೇಲೆ ಕಲ್ಲುತೂರಾಟ ನಡೆದ ಘಟನೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು.
ಬಹುತೇಕ 2020ರ ವರ್ಷವಿಡೀ ಜಗತ್ತು ಕರೊನಾ ಹಾವಳಿಯಿಂದಾಗಿ ನಾನಾ ಸಂಕಷ್ಟ ಅನುಭವಿಸಬೇಕಾಗಿ ಬಂತು. ಹೀಗಾಗಿ ಕರೊನಾ ಪರಿಗಣನೆಯಿಲ್ಲದೆ ಯಾವ ರಂಗವನ್ನೂ ಅವಲೋಕಿಸುವಂತಿಲ್ಲ. ಈಗಲೂ ಕಷ್ಟಪರಂಪರೆ ಮುಗಿದಿಲ್ಲ. ಲಸಿಕೆ ಬಂದು ವ್ಯಾಪಕವಾಗಿ ಜನರಿಗೆ ನೀಡಿದ ನಂತರದಲ್ಲಿ ಪರಿಸ್ಥಿತಿ ಸುಧಾರಿಸಬಹುದು. ಕರೊನಾ ನಿಯಂತ್ರಣದ ಸಲುವಾಗಿ ಲಾಕ್ ಡೌನ್ ವಿಧಿಸಿದ್ದರಿಂದಾಗಿ ಇಡೀ ಜನಜೀವನ ಸ್ತಬ್ಧವಾಯಿತು. ಎಲ್ಲ ಬಗೆಯ ಕೈಗಾರಿಕೆಗಳು ತೊಂದರೆಗೆ ಸಿಲುಕಿದವು. ನಿರುದ್ಯೋಗ ಪ್ರಮಾಣ ಏರಿತು. ಜತೆಗೆ, ಉದ್ಯೋಗನಷ್ಟವೂ ಆಯಿತು. ಬರಲಿರುವ ವರ್ಷದಲ್ಲಿ ಪರಿಸ್ಥಿತಿ ಸುಧಾರಿಸುವ ಆಶಾವಾದ ವ್ಯಕ್ತವಾಗಿರುವುದೊಂದೇ ಸಮಾಧಾನದ ಊರುಗೋಲು.
ಬರಹ: ರವೀಂದ್ರ ಎಸ್. ದೇಶಮುಖ್