

ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಮದುವೆ ಆಗುವುದಾಗಿ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಎಫ್ ಟಿಎಸ್ ಸಿ 3ನೇ ನ್ಯಾಯಾಲಯದ ನ್ಯಾ. ಎಸ್. ಮಹೇಶ್ ಅವರು ತೀರ್ಪು ನೀಡಿದ್ದಾರೆ. ಜೆ.ಪಿ.ನಗರದ 8ನೇ ಹಂತದ ನಿವಾಸಿ ಎಸ್.ಸುನೀಲ್ (23) ಅಪರಾಧಿ. 20 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಲಾಗಿದೆ. ಸಂತ್ರಸ್ತ ಬಾಲಕಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ಗೊರವರ ವಾದ ಮಂಡಿಸಿದ್ದರು.
2022ರಲ್ಲಿ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಸುನೀಲ್, ಆಕೆ ಜತೆಗೆ ಖಾಸಗಿ ಕ್ಷಣಗಳನ್ನು ಕಳೆಯಬೇಕೆಂದು ಪ್ರೀತಿಸುವ ನಾಟಕ ಮಾಡಿದ್ದ. 2023ರ ಫೆಬ್ರವರಿಯಲ್ಲಿ ಬಾಲಕಿಯನ್ನು ಮನೆಗೆ ಕರೆಸಿಕೊಂಡು ಪ್ರೀತಿಸುತ್ತಿದ್ದೇನೆ. ಮದುವೆಯೂ ಆಗುತ್ತೇನೆ.
ಭಯ ಪಡಬೇಡ ಎಂದು ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಆನಂತರ ಬೆದರಿಸಿ ನಾಲ್ಕೈದು ಬಾರಿ ಆಕೆಗೆ ಕಿರುಕುಳ ಕೊಟ್ಟಿದ್ದ. ಕೊನೆಗೆ ಬಾಲಕಿ ಗರ್ಭಿಣಿ ಆಗಿರುವ ವಿಷಯ ಗೊತ್ತಾಗಿ ಪಾಲಕರು ಕೋಣನಕುಂಟೆ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖಾಧಿಕಾರಿಗಳಾದ ಶಿವಕುಮಾರ್ ಮತ್ತು ಎಂ. ಪಾಪಣ್ಣ, ಸುನೀಲ್‌ನನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅಂತಿಮ ತೀರ್ಪ ಪ್ರಕಟಿಸಿದೆ.