20 ಸಂಸ್ಥೆಗಳು, 408 ಗಂಟೆ ನಿರಂತರ ಕೆಲಸ!; ತ್ವರಿತ ನಿರ್ಧಾರ

Tunnel rescue
Published on

ನವದೆಹಲಿ: ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿರುವ ಕಾರ್ವಿುಕರನ್ನು ರಕ್ಷಿಸಲು ಕೇಂದ್ರ ಸರ್ಕಾರ ಸ್ಥಾಪನೆ ಮಾಡಿದ್ದ ವಿಶೇಷ ವಾರ್ ರೂಂ 408 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ 20ಕ್ಕೂ ಹೆಚ್ಚು ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಎಲ್ಲ ಏಜೆನ್ಸಿಗಳು, ಪ್ರಧಾನಿ ಕಾರ್ಯಾಲಯ ಮತ್ತು ಕೇಂದ್ರ ಗೃಹ ಸಚಿವಾಲಯದ ಸಹಯೋಗದೊಂದಿಗೆ ತ್ವರಿತ ಗತಿಯಲ್ಲಿ ಅಗತ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದವು. ಅಮೆರಿಕದ ಡ್ರಿಲ್ ಮೆಷಿನ್ ‘ಆಗರ್’ ಅನ್ನು ಸುರಂಗಕ್ಕೆ ಇಳಿಸುವ ವಿಷಯದಿಂದ ಹಿಡಿದು, ಪ್ರತಿಕೂಲ ಪರಿಸ್ಥಿತಿಗಳಲ್ಲಿ ಅಗೆಯಲು ‘ರ್ಯಾಟ್ ಮೈನರ್ಸ್’ ಸಹಾಯ ಪಡೆಯುವ ವರೆಗೆ ಅನೇಕ ಮಹತ್ವದ ನಿರ್ಧಾರಗಳನ್ನು ಕೇವಲ ಅರವತ್ತು ನಿಮಿಷಗಳ ಒಳಗೆ ಕೈಗೊಳ್ಳಲಾಗುತ್ತಿತ್ತು. ಏಜೆನ್ಸಿಗಳ ನಡುವಿನ ಸಮನ್ವಯ ಸಾಧಿಸಲಾಗಿತ್ತು.

ಇದು ಇದುವರೆಗಿನ ದೊಡ್ಡ ಕಾರ್ಯಾಚರಣೆಯಾಗಿದೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸುರಂಗದ ಒಳಗೆ 41 ಜನರ ಪ್ರಾಣಕ್ಕೆ ಅಪಾಯವಿತ್ತು. ಕಾರ್ವಿುಕರು ಸುರಂಗದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ದೊರೆತಾಗ, ಪಿಎಂಒ ಮತ್ತು ಗೃಹ ಸಚಿವಾಲಯ ಸಕ್ರಿಯವಾಯಿತು. ಕೇಂದ್ರ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ಇಲಾಖೆಗಳ ನಡುವೆ ಯಾವುದೇ ವಿಳಂಬವಿಲ್ಲದೆ ಸಭೆ ನಡೆಯಿತು. ಕೇವಲ 24 ಗಂಟೆಗಳಲ್ಲಿ ವಾರ್ ರೂಂ ಸಿದ್ಧವಾಯಿತು. ಇದರ ನಂತರ 41 ಕಾರ್ವಿುಕರನ್ನು ಉಳಿಸುವ ಹೋರಾಟ ಪ್ರಾರಂಭವಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಎನ್​ಡಿಎಂಎ ಸದಸ್ಯ ಸೈಯದ್ ಅತಾ ಹಸ್ನೇನ್, ಎನ್​ಡಿಆರ್​ಎಫ್ ಮುಖ್ಯಸ್ಥ ಮತ್ತು ಉತ್ತರಾಖಂಡ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹತ್ತಕ್ಕೂ ಹೆಚ್ಚು ಇಲಾಖೆಗಳ ಮುಖ್ಯಸ್ಥರು ವಾರ್ ರೂಂನಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ್ದರು.

ಅಡ್ಡಿ-ಆತಂಕಗಳ ಮಧ್ಯೆ ನಿರಂತರ ಕಾರ್ಯಾಚರಣೆ: ಹಲವಾರು ಅಡ್ಡಿ-ಆತಂಕಗಳ ನಡುವೆ ನಡೆಸಿದ ನಾನಾ ರೀತಿಯ ಪ್ರಯತ್ನಗಳು ಕೊನೆಗೂ ಫಲಪ್ರದವಾಗಿವೆ. ಭಾರತೀಯ ಸೇನೆ, ಎನ್​ಡಿಎಂಎ, ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್, ವಿದೇಶಿ ತಂತ್ರಜ್ಞರು, ವಿವಿಧ ಪರಿಣತರು, ಸ್ಥಳೀಯ ನುರಿತ ಕೆಲಸಗಾರರು ಸೇರಿದಂತೆ ದೊಡ್ಡದೊಂದು ಸಮೂಹವೇ ಈ ಬೃಹತ್ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು. ಕಾರ್ವಿುಕರು ಸಿಲುಕಿಕೊಂಡಿದ್ದ ಸುರಂಗದ ಪ್ರದೇಶಕ್ಕೆ ತೆರಳಲು ವಿದೇಶದ ಆಗರ್ ಯಂತ್ರವನ್ನು ತರಿಸಲಾಗಿತ್ತಾದರೂ ಸುಮಾರು 42 ಮೀ. ಕೊರೆಯುವಷ್ಟರಲ್ಲಿ ಬಲವಾದ ವಸ್ತು ತಗುಲಿ ಅದರ ಬ್ಲೇಡ್​ಗಳು ಹಾನಿಗೀಡಾದವು. ಹೀಗೆ ಸಮಾನಾಂತರ ಕೊರೆಯುವಿಕೆಗೆ ಅಡ್ಡಿಯಾದ ಬಳಿಕ ಆಗರ್ ಯಂತ್ರವನ್ನು ದುರಸ್ತಿಪಡಿಸಿಕೊಳ್ಳುವ ಜತೆಜತೆಗೆ ಲಂಬ ಕೊರೆಯುವಿಕೆ ಮೂಲಕ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಇದರ ಜತೆಗೆ ಒಟ್ಟ 5 ಆಯ್ಕೆಗಳಿದ್ದವು. ಮೂರು ಕಾರ್ಯಾಚರಣೆಯನ್ನು ಏಕಕಾಲದಲ್ಲಿ ಕೈಗೊಳ್ಳಲಾಗಿತ್ತು.

ಲೋಪ ಆಗಿದ್ದು ಎಲ್ಲಿ?: ಸುರಂಗ ನಿರ್ಮಾಣ ತಂಡಗಳು ನಡೆಸಿದ ಸ್ಪೋಟದಿಂದ ಕುಸಿತ ಸಂಭವಿಸಿದೆ ಎಂದು ಹೇಳಲಾಗಿದೆ. ಸುರಂಗದ ನಿರ್ಮಾಣ ಯೋಜನೆ ನೀಲಿನಕ್ಷೆಯಲ್ಲಿ ತುರ್ತು ನಿರ್ಗಮನ ದ್ವಾರ ಉಲ್ಲೇಖ ಮಾಡಲಾಗಿದೆ. ಆದರೆ ಅದನ್ನು ನಿರ್ಮಾಣ ಮಾಡಿಯೇ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ದುರ್ಬಲವಾದ ಹಿಮಾಲಯ ಪ್ರದೇಶ ಮತ್ತು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಆತುರದ ಅಭಿವೃದ್ಧಿ ಯೋಜನೆ ಕೈಗೊಂಡಿರುವುದು ಘಟನೆಗೆ ಕಾರಣ ಇರಬಹುದು ಎಂದು ಕೆಲ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅರ್ನಾಲ್ಡ್ ಡಿಕ್ಸ್ ಪ್ರಾರ್ಥನೆ: ಕಾರ್ವಿುಕರ ರಕ್ಷಣಾ ಕಾರ್ಯಾಚರಣೆಗೆ ವಿದೇಶ ದಿಂದ ಬಂದಿರುವ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಕಾರ್ಯಾಚರಣೆ ಸ್ಥಳದ ಸಮೀಪ ಇರುವ ಚಿಕ್ಕ ಗುಡಿಯಲ್ಲಿ ದೇವರ ಪೂಜೆಯಲ್ಲಿ ತೊಡಗಿ ಪ್ರಾರ್ಥನೆ ಮಾಡಿಕೊಂಡಿರುವುದು ಗಮನ ಸೆಳೆದಿದೆ. ಅಲ್ಲಿನ ದೇವರ ಗುಡಿ ಮುಂದೆ ಅರ್ಚಕರ ಎದುರು ಕುಳಿತ ಅರ್ನಾಲ್ಡ್ ಧಾರ್ವಿುಕ ವಿಧಿಯಲ್ಲಿ ಪಾಲ್ಗೊಂಡ ದೃಶ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೋದಿ ಇದ್ರೆ ಎಲ್ಲವೂ ಸಾಧ್ಯ: ಕಾರ್ಯಾಚರಣೆ ಇನ್ನೇನು ಅಂತಿಮ ಹಂತದಲ್ಲಿ ಇದೆ ಎನ್ನುವಾಗ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದರು. ಕಾರ್ಯಾಚರಣೆ ಮುಗಿಯುತ್ತ ಬಂದಾಗ ಕೆಲವರು ಭಾರತ್ ಮಾತಾ ಕೀ ಜೈ, ಮೋದಿ ಇದ್ರೆ ಎಲ್ಲವೂ ಸಾಧ್ಯ (ಮೋದಿ ಹೈ ತೊ ಮುಮ್ಕಿನ್ ಹೈ) ಎಂಬ ಘೋಷಣೆಗಳನ್ನು ಕೂಗಿದರು.

ಕೆಲಸಕ್ಕೆ ಹೋಗಲು ಬಿಡಲ್ಲ: ಸುರಂಗದಲ್ಲಿ ಸಿಲುಕಿದ್ದ ಕಾರ್ವಿುಕ, ಜಾರ್ಖಂಡ್​ನ ಅನಿಲ್ ಬೇಡಿ ಎಂಬಾತನ ತಂದೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದು, ನನ್ನ ಮಗ ನಮಗೆ ಹೇಳದೆ ಉತ್ತರಾಖಂಡಕ್ಕೆ ಕೆಲಸಕ್ಕೆ ಹೋಗಿದ್ದ. ಅವನು ವಾಪಸ್ ಬಂದ ಮೇಲೆ ಮತ್ತೆ ಅಲ್ಲಿಗೆ ಕೆಲಸಕ್ಕೆ ಹೋಗಲು ಬಿಡುವುದಿಲ್ಲ ಎಂದಿದ್ದಾರೆ.

ಕಾರ್ಯಾಚರಣೆಗೆ ಮೆಚ್ಚುಗೆ: ಸೇನೆ, ಎನ್​ಡಿಎಂಎ, ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್ ಸೇರಿದಂತೆ ಹಲವರು 17 ದಿನಗಳ ಕಾಲ ನಿರಂತರವಾಗಿ ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಅವಿರತ ಪ್ರಯತ್ನಕ್ಕೆ ವಿವಿಧ ಪಕ್ಷ- ಕ್ಷೇತ್ರಗಳ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲೂ ಬಹಳಷ್ಟು ಸಾರ್ವಜನಿಕರು ಪ್ರಶಂಸಿಸಿದ್ದಾರೆ.

ಏನಿದು ಯೋಜನೆ?: 4.5 ಕಿ.ಮೀ. ಉದ್ದದ ಸುರಂಗವು ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷೆಯ ಚಾರ್ ಧಾಮ್ ಹೆದ್ದಾರಿ ಯೋಜನೆಯ ಭಾಗವಾಗಿದೆ. ಉತ್ತರಾಖಂಡದ ನಾಲ್ಕು ಪ್ರಮುಖ ಹಿಂದು ಪುಣ್ಯಕ್ಷೇತ್ರಗಳಾದ ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ನಡುವೆ ಈ ಹೆದ್ದಾರಿ ಸಂಪರ್ಕ ಕಲ್ಪಿಸುತ್ತದೆ. ಈ ಸುರಂಗವು ಉತ್ತರಕಾಶಿ ಜಿಲ್ಲೆಯ ಸಿಲ್ಕಾ್ಯರಾ ಮತ್ತು ದಂಡಲ್ಗಾಂವ್ ಸಂರ್ಪಸುವ ಮಾರ್ಗದಲ್ಲಿದೆ. ಇದು ಡಬಲ್ ಲೇನ್ ಸುರಂಗವಾಗಿದ್ದು, ಅತಿ ಉದ್ದದ ಸುರಂಗವಾಗಿದೆ. ಇದು ಪೂರ್ಣಗೊಂಡ ನಂತರ ಒಟ್ಟು ಪ್ರಯಾಣದ ಸಮಯದಲ್ಲಿ ಒಂದು ಗಂಟೆ ಉಳಿತಾಯವಾಗಲಿದೆ. ಸುರಂಗ ನಿರ್ವಿುಸುವ ಯೋಜನೆಯನ್ನು ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ನಡೆಸುತ್ತಿದೆ.

ರಕ್ಷಣಾ ಕಾರ್ಯದ ಹಾದಿ...

  • ನವೆಂಬರ್ 12: ದೀಪಾವಳಿಯ ದಿನ ಬೆಳಗ್ಗೆ 5.30ರ ಸುಮಾರಿಗೆ ಸುರಂಗದಲ್ಲಿ ಭೂಕುಸಿತ. ಎನ್​ಡಿಆರ್​ಎಫ್ ಸಹಿತ ಅನೇಕ ಏಜೆನ್ಸಿಗಳು ರಕ್ಷಣಾ ಕಾರ್ಯದಲ್ಲಿ ಭಾಗಿ.
  • ನ.13: ಕಾರ್ವಿುಕರು ಸುರಕ್ಷಿತವಾಗಿದ್ದಾರೆ ಎಂದು ವರದಿ. ತೆರವು ಕಾರ್ಯ ಆರಂಭಮಾಡುತ್ತಿದ್ದಂತೆ ಮತ್ತೆ ಕುಸಿತ. ಸುಮಾರು 30 ಮೀಟರ್ ಪ್ರದೇಶದಲ್ಲಿ ಸಂಗ್ರಹವಾದ ಶಿಲಾಖಂಡರಾಶಿಗಳು 60 ಮೀಟರ್​ಗಳಿಗೆ ವಿಸ್ತರಣೆ.
  • ನ.14: 900 ಮಿಲಿ ಮೀಟರ್ ವ್ಯಾಸದ ಉಕ್ಕಿನ ಕೊಳವೆಗಳನ್ನು ಒಳಗೆ ತೂರಿಸುವ ಸಲುವಾಗಿ ಆಗರ್ ಯಂತ್ರ ಸ್ಥಳಕ್ಕೆ ರವಾನೆ.
  • ನ.16: ಕೊರೆಯುವ ಯಂತ್ರವನ್ನು ಜೋಡಿಸಿ, ಮಧ್ಯರಾತ್ರಿಯ ನಂತರ ಕೆಲಸ ಪ್ರಾರಂಭ.
  • ನ.17: ಯಂತ್ರವು ಮಧ್ಯಾಹ್ನದ ವೇಳೆಗೆ 24 ಮೀಟರ್ ಕೊರೆಯುವಲ್ಲಿ ಯಶಸ್ವಿ. ಇನ್ನೂ 4 ಪೈಪ್ ಅಳವಡಿಕೆ. ಐದನೇ ಪೈಪ್ ಜೋಡಣೆ ವೇಳೆ ತಾಂತ್ರಿಕ ದೋಷ. ಸಂಜೆ ವೇಳೆಗೆ ಸುರಂಗದಲ್ಲಿ ದೊಡ್ಡ ಬಿರುಕು, ಧ್ವನಿ ಕೇಳಿ ಬಂದ ಬಗ್ಗೆ ವರದಿ. ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತಷ್ಟು ಕುಸಿತದ ಸಾಧ್ಯತೆಯ ಬಗ್ಗೆ ತಜ್ಞರ ಎಚ್ಚರಿಕೆ. ಕಾರ್ಯಾಚರಣೆ ಸ್ಥಗಿತ.
  • ನ.15: ಮೊದಲ ಡ್ರಿಲ್ಲಿಂಗ್ ಮೆಷಿನ್ ಕೆಲಸ ವಿಫಲಗೊಂಡ ಕಾರಣ ಅತ್ಯಾಧುನಿಕ ಆಗರ್ ಯಂತ್ರ ದೆಹಲಿಯಿಂದ ವಾಯುಪಡೆ ವಿಮಾನ ಮೂಲಕ ರವಾನೆ
  • ನ.18: ಕಾರ್ವಿುಕರನ್ನು ರಕ್ಷಿಸಲು ಸುರಂಗದ ಮೇಲ್ಭಾಗದಲ್ಲಿ ಲಂಬವಾಗಿ ಸಣ್ಣ ಸುರಂಗ ಕೊರೆಯುವುದು ಸೇರಿ ಏಕಕಾಲದಲ್ಲಿ ಐದು ಯೋಜನೆಗಳಲ್ಲಿ ಕೆಲಸ ಮಾಡಲು ನಿರ್ಧಾರ. ಪರ್ಯಾಯ ಆಯ್ಕೆಗಳ ಬಗ್ಗೆ ಪರಿಶೀಲನೆ.
  • ನ.20: ಪ್ರಧಾನಿ ಮೋದಿ, ಉತ್ತರಾಖಂಡ ಸಿಎಂ ಪುಷ್ಕರ್ ಧಾಮಿ ದೂರವಾಣಿ ಮೂಲಕ ಮಾತುಕತೆ. ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದ ಪ್ರಧಾನಿ. ಹೆವಿ-ಡ್ಯೂಟಿ ಆಗರ್ ಯಂತ್ರದ ಡ್ರಿಲ್ಲಿಂಗ್​ಗೆ ಬಂಡೆ ಕಾಣಿಸಿಕೊಂಡ ನಂತರ ಕಾರ್ಯ ಸ್ಥಗಿತ.
  • ನ. 21: ಸುರಂಗದೊಳಗೆ ಕ್ಯಾಮರಾ ಕಳಿಸುವಲ್ಲಿ ಯಶಸ್ವಿ. ಕಾರ್ವಿುಕರು ಆಹಾರ ಪದಾರ್ಥಗಳನ್ನು ಸೇವಿಸುವುದು, ಪರಸ್ಪರ ಮಾತನಾಡುತ್ತಿರುವ ಮೊದಲ ವೀಡಿಯೊ ಬಹಿರಂಗ.
  • ನ.22: ಸುರಂಗದ ಹೊರಗೆ ಆಂಬ್ಯುಲೆನ್ಸ್​ಗಳು ಸಿದ್ಧ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ವಿಶೇಷ ವಾರ್ಡ್. 57 ಮೀಟರ್ ಡ್ರಿಲ್ಲಿಂಗ್ ಯಶಸ್ವಿ. ಇನ್ನು ಕೇವಲ 12 ಮೀಟರ್ ಬಾಕಿ. ಸಂಜೆ ವೇಳೆಗೆ ಕೆಲವು ಕಬ್ಬಿಣದ ರಾಡ್​ಗಳು ಆಗರ್ ಯಂತ್ರದ ದಾರಿಗೆ ಅಡ್ಡ ಬಂದಾಗ ಕೊರೆಯುವಿಕೆ ಸ್ಥಗಿತ.
  • ನ.23: ರಕ್ಷಣಾ ಕಾರ್ಯಾಚರಣೆ ಪುನರಾರಂಭ. ಕೊರೆಯುವ ಯಂತ್ರ ನಿಂತಿರುವ ಪ್ಲಾಟ್​ಫಾಮ್ರ್ ನಲ್ಲಿ ಬಿರುಕಿನಿಂದ ಮತ್ತೆ ಕಾರ್ಯಾಚರಣೆಗೆ ಅಡ್ಡಿ.
  • ನ.24: ಬೆಳಗ್ಗೆ ಕೊರೆಯುವ ಕೆಲಸ ಆರಂಭಿಸಿದಾಗ ಆಗರ್ ಯಂತ್ರದ ದಾರಿಯಲ್ಲಿ ಸ್ಟೀಲ್ ಪೈಪ್ ಅಡ್ಡ ಬಂದ ಕಾರಣ ಆಗರ್ ಯಂತ್ರಕ್ಕೆ ಹಾನಿ. ಕಾರ್ಯಾಚರಣೆ ಸ್ಥಗಿತ.
  • ನ.25: ಕಾರ್ವಿುಕರ ರಕ್ಷಣೆಗೆ ಇರುವ ಇತರ ಆಯ್ಕೆಗಳ ಬಗ್ಗೆ ಪರಿಶೀಲನೆ. ಸುರಂಗದ ಮೇಲಿನಿಂದ ಲಂಬವಾಗಿ ಕೊರೆಯಲು ಸಿದ್ಧತೆ ಆರಂಭ.
  • ನ.26: ಲಂಬವಾಗಿ ಕೊರೆಯುವಿಕೆ ಪ್ರಕ್ರಿಯೆ ರಾತ್ರಿ 11 ಗಂಟೆಯವರೆಗೆ 20 ಮೀಟರ್ ವರೆಗೆ ನಡೆಯಿತು.
  • ನ.27: ಸಂಜೆಯ ವೇಳೆಗೆ ಆಗರ್ ಯಂತ್ರದ ಹೊರತೆಗೆಯ ಲಾಯಿತು. ರ್ಯಾಟ್ ಹೋಲ್ ಮೈನರ್ಸ್​ರಿಂದ ಭೌತಿಕವಾಗಿ ಅಗೆಯುವ ಕೆಲಸ ಆರಂಭ
  • ನ.28: ರ್ಯಾಟ್ ಹೋಲ್ ಮೈನರ್ಸ್ ಕೊರೆದ ರಂಧ್ರದ ಮೂಲಕ ಉಕ್ಕಿನ ಪೈಪ್ ಅಳವಡಿಕೆ ಯಶಸ್ವಿ. ಈ ಪೈಪ್ ಮೂಲಕ ಕಾರ್ವಿುಕರು ಸುರಂಗದಿಂದ ಹೊರಕ್ಕೆ.

ಸತತ 17 ದಿನಗಳ ರಕ್ಷಣಾ ಕಾರ್ಯಾಚರಣೆ ನಂತರ ಉತ್ತರಾಖಂಡದ ಸುರಂಗದೊಳಗೆ ಸಿಲುಕಿಕೊಂಡಿದ್ದ ಎಲ್ಲಾ 41 ಕಾರ್ವಿುಕರು ಸುರಕ್ಷಿತವಾಗಿ ಹೊರಬಂದಿರುವುದು ನೋಡಿ ಅತ್ಯಂತ ಖುಷಿಯಾಯಿತು. ರಕ್ಷಣಾ ಸಿಬ್ಬಂದಿಗಳಿಗೆ ಧನ್ಯವಾದಗಳು. ಕೋಟ್ಯಂತರ ಭಾರತೀಯರ ಹಾರೈಕೆಗಳು, ಕಾರ್ವಿುಕರ ಕುಟುಂಬ ಸದಸ್ಯರ ಪ್ರಾರ್ಥನೆ ಈ ಕ್ಷಣ ಫಲ ನೀಡಿದೆ.

| ಸಿದ್ದರಾಮಯ್ಯ ಮುಖ್ಯಮಂತ್ರಿ

ರಕ್ಷಿಸಲ್ಪಟ್ಟ ಯಾವ ಕಾರ್ವಿುಕರೂ ಅಪಾಯದಲ್ಲಿಲ್ಲ. ಅದಾಗ್ಯೂ ಅವರನ್ನು ವೈದ್ಯಕೀಯ ಮೇಲ್ವಿಚಾರಕರ ನಿಗಾದಲ್ಲಿರಿಸಿ ಆ ಬಳಿಕವಷ್ಟೇ ಮನೆಗೆ ಕಳುಹಿಸಿ ಕೊಡಲಾಗುವುದು. ಪ್ರತಿ ಕಾರ್ವಿುಕರಿಗೂ ಒಂದು ಲಕ್ಷ ರೂ. ಆರ್ಥಿಕ ನೆರವು, ವೇತನ ಸಹಿತ ಒಂದು ತಿಂಗಳು ರಜೆ ನೀಡಲಾಗುವುದು.

| ಪುಷ್ಕರ್​ಸಿಂಗ್ ಧಾಮಿ ಉತ್ತರಾಖಂಡ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net