ಟೆಕ್ಕಿಗೆ ಗೊತ್ತಿಲ್ಲದೆ 20 ಲಕ್ಷ ಲೋನ್

Cyber Attack
Published on

ಬೆಂಗಳೂರು: ಸಾಫ್ಟ್‌ವೇರ್ ಇಂಜಿನಿಯರ್‌ಗೆ ಗೊತ್ತಿಲ್ಲದೆ ಆತನ ಹೆಸರಿನಲ್ಲಿ 19.92 ಲಕ್ಷ ರೂ. ಸಾಲ ಪಡೆದು ಸೈಬರ್ ಕಳ್ಳರು ವಂಚನೆಗೆ ಯತ್ನಿಸಿದ್ದು, ಅನ್ನಪೂಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಿಡದಕೊನೇನಹಳ್ಳಿಯ ಸಾಫ್ಟ್‌ವೇರ್ ಇಂಜಿನಿಯರ್‌ಗೆ ವಂಚನೆಗೆ ಯತ್ನಿಸಿದ್ದಾರೆ. ಕೆಲಸ ನಿಮಿತ್ತ ಬೆಲ್ಜಿಯಂಗೆ ಟೆಕ್ಕಿ ಹೋಗಿರುವ ಕಾರಣಕ್ಕೆ ಅವರ ತಂದೆ ಅನ್ನಪೂಣೇಶ್ವರಿನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲಸ ನಿಮಿತ್ತ ಬೆಲ್ಜಿಯಂಗೆ ಹೋಗಿರುವ ಟೆಕ್ಕಿಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ, ಮುಂಬೈ ಪೊಲೀಸ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಿಮ್ಮ ಹೆಸರಿನಲ್ಲಿ ಫೆಡೆಕ್ಸ್ ಕೋರಿಯರ್‌ನಲ್ಲಿ ವಿದೇಶಕ್ಕೆ ಕಾನೂನು ಬಾಹಿರ ವಸ್ತುಗಳು ಪಾರ್ಸೆಲ್ ಹೋಗುತ್ತಿವೆ. ಆದರಿಂದ ತನಿಖೆ ಸಲುವಾಗಿ ಸ್ಕೈಪ್ ಆ್ಯಪ್‌ನಲ್ಲಿ ವಿಡಿಯೋ ಕಾಲ್ ಮಾಡುವಂತೆ ಸೂಚಿಸಿದ್ದಾರೆ. ಹೆದರಿದ ಟೆಕ್ಕಿ, ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಕರೆ ಮಾಡಿದಾಗ ತನಿಖೆ ನೆಪದಲ್ಲಿ ಸೈಬರ್ ಕಳ್ಳರು ವಿಚಾರಣೆ ಶುರು ಮಾಡಿದ್ದಾರೆ.

ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ವಿವರ ಪಡೆದು ಬ್ಯಾಂಕ್ ಖಾತೆ ಪರಿಶೀಲನೆ ನಡೆಸಬೇಕಿದೆ. ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತ್ತೆವೆ ಎಂದು ಹೇಳುತ್ತಿದಂತೆ 19.92 ಲಕ್ಷ ರೂ. ಟೆಕ್ಕಿ ಖಾತೆಗೆ ಜಮೆಯಾಗಿದೆ. ಇದರಿಂದ ಅನುಮಾನಗೊಂಡ ಟೆಕ್ಕಿ, ಕಾಲ್ ಸ್ಥಗಿತ ಮಾಡಿ ತನ್ನ ಬ್ಯಾಂಕ್‌ನ ಶಾಖೆಗೆ ಕರೆ ಮಾಡಿ ವಿಚಾರ ಮಾಡಿದಾಗ ‘ನಿಮ್ಮ ಹೆಸರಿನಲ್ಲಿ ಸಾಲ ಮಂಜೂರು ಆಗಿದೆ.

ಅದರ ಇಎಂಐ ಪಾವತಿ ಮಾಡಬೇಕಾಗಿದೆ’ ಎಂದು ಮಾಹಿತಿ ಕೊಟ್ಟಿದ್ದಾರೆ. ಗಾಬರಿಗೊಂಡ ಟೆಕ್ಕಿ, ಯಾವುದೇ ಲೋನ್‌ಗೆ ಅರ್ಜಿ ಸಲ್ಲಿಸದೆ ಇದ್ದರೂ ಸಾಲ ಮಂಜೂರು ಆಗಿರುವುದು ಕಂಡು ಅವರ ತಂದೆ ಕಡೆಯಿಂದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net