

ವಿಜಯಪುರ: ನಿನ್ನೆ ಆಟವಾಡುವ ಗುಂಗಿನಲ್ಲಿ ತೆರೆದಿದ್ದ ಕೊಳವೆ ಬಾವಿಗೆ ಎರಡು ವರ್ಷದ ಮಗುವೊಂದು ಆಯಾತಪ್ಪಿ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಸಂಭವಿಸಿತ್ತು. ಸತತ 15 ಗಂಟೆಗಳಿಂದ ಕಾರ್ಯಾಚರಣೆ ನಡೆಸಿದ ಬಳಿಕ ಇದೀಗ ಮಗುವನ್ನು ಹೊರತೆಗೆಯುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದ್ದು, ಕೋಟ್ಯಾಂತರ ಕನ್ನಡಿಗರ ಪ್ರಾರ್ಥನೆ ಕಡೆಗೂ ಫಲಿಸಿತು.
ಭೀಮಾತೀರದಲ್ಲಿ ಹೃದಯ ವಿದ್ರಾವಕ ಘಟನೆಯಲ್ಲಿ 2 ವರ್ಷದ ಬಾಲಕ ಸಾತ್ವಿಕ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. ಮಗುವಿನ ಕಾಲುಗಳ ಅಲುಗಾಟ ದೃಶ್ಯದಲ್ಲಿ ಸೆರೆಯಾಗಿತ್ತು. ಇದೀಗ ಬಾಲಕ ಜೀವಂತವಾಗಿ, ಸುರಕ್ಷಿತವಾಗಿ ಹೊರಬಂದಿದ್ದು, ಪೋಷಕರಲ್ಲಿ ಆನಂದ ಮುಗಿಲು ಮುಟ್ಟಿದೆ.
ಭೀಕರದ ಬರದಿಂದಾಗಿ ಬತ್ತಿದ ಭೀಮಾ ದಡದಲ್ಲಿ ಜೀವ ಜಲಕ್ಕಾಗಿ ಮಗುವಿನ ಪೋಷಕರು ಕೊಳವೆ ಬಾವಿ ತೆಗೆಸಿದ್ದರು. ಬೋರ್ ತೆಗೆಸಿ ಕೆಲವೇ ಗಂಟೆಗಳಲ್ಲಿ ಇಂತಹ ದುರ್ಘಟನೆ ಸಂಭವಿಸುತ್ತದೆ ಎಂದು ಊಹಿಸಿರಲಿಲ್ಲ ಎಂದು ಮಗುವಿನ ತಂದೆ ಅಳಲು ತೋಡಿಕೊಂಡಿದ್ದರು. ಸದ್ಯ 200 ಅಡಿ ಆಳದ ಸುರಂಗದಲ್ಲಿ 20 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನಿಗೆ ರಕ್ಷಣಾ ತಂಡ ನಿರಂತರವಾಗಿ ಆಮ್ಲಜನಕ ಪೂರೈಕೆ ಮಾಡಿತ್ತು.
ಬಾಲಕನನ್ನು ರಕ್ಷಣೆ ಮಾಡುವ ಮಧ್ಯದಲ್ಲಿ ಸಿಲುಕಿದ್ದ ಕಲ್ಲನ್ನು ಬದಿಗೆ ಸರಿಸಿ ಮಗುವನ್ನು ಸುರಕ್ಷಿತವಾಗಿ ಹೊರಗೆ ಕರೆತರಬೇಕಿತ್ತು. ಈ ಸವಾಲನ್ನು ಯಶಸ್ವಿಯಾಗಿ ಪೂರೈಸಿದ ರಕ್ಷಣಾ ಪಡೆಗೆ ಕುಟುಂಬಸ್ಥರು ಹಾಗೂ ಇಡೀ ರಾಜ್ಯದ ಜನತೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದೆ. ಸದ್ಯ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
https://www.vijayavani.net/ravishastri-speaks-about-hardik-captaincy