

ನವದೆಹಲಿ: ಭಾರತ- ಪಾಕ್ ನಡುವಿನ ಗಡಿ ನಿಯಂತ್ರಣ ರೇಖೆಯ 100 ಮೀಟರ್ ದೂರದಲ್ಲಿ ಭಾರತೀಯ ಯೋಧರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಇಬ್ಬರನ್ನು ಸಿಖ್ ಲೈಟ್ ಇನ್ಫೆಂಟ್ರಿ ಯೋಧರು ಮಧ್ಯರಾತ್ರಿ ಹತ್ಯೆ ಮಾಡಲಾಗಿದೆ ಎಂದು ಸೇನಾಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಚೀನಾ ನಿರ್ಮಿತ ಡ್ರೋನ್ಗಳನ್ನು ಬಳಸಿ ಭಾರತಕ್ಕೆ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಪಾಕಿಸ್ತಾನ ಕಳ್ಳಸಾಗಣೆ ಮಾಡುವುದನ್ನು ತಡೆಯಲು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಡ್ರೋನ್ ನಿರೋಧಕ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಸೇನೆ ಮಾಹಿತಿ ನೀಡಿದೆ.
ಹತ್ಯೇಗೀಡಾದವರ ಪೈಕಿ ಒಬ್ಬನನ್ನು ಇದ್ರಿಸ್ ಅಹ್ಮದ್ ಭಟ್ ಎಂದು ಗುರತಿಸಲಾಗಿದೆ. ಇವರು ಲಷ್ಕರ್ ಗುಂಪಿಗೆ ಸೇರಿದವರೆಂದು ಅಂದಾಜಿಸಲಾಗಿದೆ.
ಎ.ಕೆ-47 ಬಂದೂಕು, ನೂರಾರು ಬುಲ್ಲೆಟ್ಗಳು, ಚೀನಾ ನಿರ್ಮಿತ ಪಿಸ್ತೂಲ್, ಪಾಕ್ನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ನಿರ್ಮಿಸಲಾದ ನಾಲ್ಕು ಗ್ರೆನೇಡ್ಗಳು ಸಿಕ್ಕಿವೆ. ಇದು ಪಾಕ್ ಕೈವಾಡಕ್ಕೆ ಸಾಕ್ಷಿಯಾಗಿವೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂಥದ್ದೇ ಗ್ರೆನೇಡ್ಗಳು ಭಾರತದ ಸಂಸತ್ ಭವನದ ಮೇಲೆ ದಾಳಿ ಮಾಡಿದ್ದ ಜೈಷ್ ಉಗ್ರರ ಬಳಿಯೂ ದೊರಕಿದ್ದವು. 20 ಮೀಟರ್ ಸುತ್ತಲಿನ ಪ್ರದೇಶದಲ್ಲಿರುವ ಎಲ್ಲರನ್ನು ಕೊಲ್ಲುವ ಸಾಮರ್ಥ್ಯ ಈ ಗ್ರೆನೇಡ್ಗಳಿಗಿದೆ.