

ಮಧ್ಯಪ್ರದೇಶ: ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ತಂಡ ಚಂಬಲ್ ನದಿ ದಾಟುತ್ತಿದ್ದಾಗ ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ. ರಾಜಸ್ಥಾನದ ಕರೌಲಿ ಜಿಲ್ಲೆಯ ಕೈಲಾ ದೇವಿ ದೇವಸ್ಥಾನಕ್ಕೆ 17 ಜನರ ಭಕ್ತರ ತಂಡ ದೇವಿಯ ದರ್ಶನ ಪಡೆಯಲು ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ದಿಯೋಕಿನಂದನ್ ಕುಶ್ವಾಹ್(55) ಮತ್ತು 40 ವರ್ಷದ ಕಲ್ಲೋ ಕುಶ್ವಾಹ್ ಮೃತರು. ಶಿವಪುರಿ ಜಿಲ್ಲೆಯ ತನ್ನ ಸ್ಥಳೀಯ ಗ್ರಾಮದಿಂದ ರಾಜಸ್ಥಾನದ ಕರೌಲಿ ಜಿಲ್ಲೆಯ ಕೈಲಾ ದೇವಿ ದೇವಸ್ಥಾನದವರೆಗೆ ಧಾರ್ಮಿಕ ಪಾದಯಾತ್ರೆ ಕೈಗೊಂಡಿದ್ದಾಗ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
ದಿಯೋಕಿನಂದನ್ ಕುಶ್ವಾಹ್ ಅವರ ಪತ್ನಿ ಅಲೋಪಾ ಕುಶ್ವಾಹ್, ರುಕ್ಮಿಣಿ ಕುಶ್ವಾಹ್, ಲವ್ಕುಶ್ ಕುಶ್ವಾಹ್ ಬ್ರಿಜ್ಮೋಹನ್ ಕುಶ್ವಾಹ್ ಮತ್ತು ರಶ್ಮಿ ಕುಶ್ವಾಹ್, ಎಲ್ಲಾ ಕುಟುಂಬ ಸದಸ್ಯರು ಅಥವಾ ಹತ್ತಿರದ ಸಂಬಂಧಿಗಳಾದ ಐವರು ನದಿಯಲ್ಲಿ ನಾಪತ್ತೆಯಾಗಿದ್ದಾರೆ. ಇವರೆಲ್ಲರೂ ಶಿವಪುರಿ ಜಿಲ್ಲಾ ಕೇಂದ್ರದಿಂದ 22 ಕಿಮೀ ದೂರದಲ್ಲಿರುವ ಚಿಲ್ವಾಡ ಗ್ರಾಮದ ನಿವಾಸಿಗಳಾಗಿದ್ದಾರೆ.
ಈ ನದಿಯು ಮಧ್ಯಪ್ರದೇಶದ ಗ್ವಾಲಿಯರ್-ಚಂಬಲ್ ಪ್ರದೇಶವನ್ನು ರಾಜಸ್ಥಾನದ ಬ್ರಜ್ ಪ್ರದೇಶದೊಂದಿಗೆ ವಿಭಜಿಸುತ್ತದೆ. 17 ಮಂದಿ ಗ್ವಾಲಿಯರ್-ಚಂಬಲ್ ಪ್ರದೇಶದ ಶಿವಪುರಿ ಜಿಲ್ಲೆಯ ಹಳ್ಳಿಯೊಂದರಿಂದ ದೇವಿಯ ದರ್ಶನಕ್ಕೆ ಆಗಮಿಸಿದ್ದರು. ರಾಜಸ್ಥಾನದ ಪೊಲೀಸರು ಮತ್ತು ರಕ್ಷಣಾ ಕಾರ್ಯಕರ್ತರು ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.