

ಕೋಲ್ಕತ: ನಾನು ಸಲಿಂಗಕಾಮಿಯಲ್ಲ ಎಂದು ಹೇಳಿ ಹಾಸ್ಟೆಲ್ ಕಟ್ಟಡದಿಂದ ಜಿಗಿದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈವರೆಗೂ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಘಟನೆ ಬಂಗಾಳದ ಜಾದವಪುರ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ. ಪ್ರಥಮ ವರ್ಷದ ವಿದ್ಯಾರ್ಥಿ, ಹಿರಿಯ ವಿದ್ಯಾರ್ಥಿಗಳ ಕಿರುಕುಳಕ್ಕೆ ಬೇಸತ್ತು ನಾನು ಸಲಿಂಗಕಾಮಿಯಲ್ಲ ಎಂದು ಹೇಳುತ್ತಲೇ ಹಾಸ್ಟೆಲ್ ಕಟ್ಟಡದಿಂದ ಕೆಳಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ರ್ಯಾಗಿಂಗ್ ಮಾಡುವಾಗ ಬಂಧಿತ ಇಬ್ಬರು ಆರೋಪಿಗಳು ಸ್ಥಳದಲ್ಲಿದ್ದರು ಎಂದು ತಿಳಿದುಬಂದಿದೆ.
ಮೃತ ಯುವಕನನ್ನು ಸ್ವಪ್ನೋದೀಪ್ ಕುಂದು ಎಂದು ಗುರುತಿಸಲಾಗಿದೆ. ಈಗಾಗಲೇ ಬಂಧನವಾಗಿರುವ ಪ್ರಕರಣದ ಮುಖ್ಯ ಆರೋಪಿ ಹಾಗೂ ಜಾದವಪುರ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಸೌರವ್ ಚೌಧರಿ ಆದೇಶದ ಮೇರೆಗೆ ಇದೀಗ ಬಂಧನವಾಗಿರುವ ಇಬ್ಬರು ಆರೋಪಿಗಳು, ಸ್ವಪ್ನೋದೀಪ್ಗೆ ತುಂಬಾ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತ ಆರೋಪಿಗಳನ್ನು ದೀಪಶೇಖರ್ ದತ್ತ (19) ಮತ್ತು ಮನೊತೋಷ್ ಘೋಷ್ (20) ಎಂದು ಗುರುತಿಸಲಾಗಿದೆ. ಇವರು ಮೃತ ವಿದ್ಯಾರ್ಥಿಗೆ ಮಾನಸಿಕವಾಗಿ ಒತ್ತಡ ಹೇರಿದ್ದರು. ಅಲ್ಲದೆ, ಮಾನಸಿಕವಾಗಿ ಹಿಂಸೆ ನೀಡಿದ್ದರು. ಆರೋಪಿಗಳಿಬ್ಬರು ಈ ಪ್ರಕರಣದಲ್ಲಿ ನೇರ ಸಂಬಂಧ ಹೊಂದಿರುವುದು ತನಿಖೆಯಲ್ಲಿ ತಿಳಿದುಬಂದ ಬಳಿಕ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ಸ್ವಪ್ನೋದೀಪ್ ಕುಂದುಗೆ ಹಾಸ್ಟೆಲ್‌ನಲ್ಲಿ ರೂಮ್ ಸಿಕ್ಕಿರಲಿಲ್ಲ. ಬಳಿಕ ಆತ ಆರೋಪಿ ಮನೊತೋಷ್ ಘೋಷ್ ರೂಮಿನಲ್ಲಿ ಗೆಸ್ಟ್ ಆಗಿ ಉಳಿಕೊಂಡಿದ್ದ. ದೀಪಶೇಖರ್ ಅರ್ಥಶಾಸ್ತ್ರ ವಿಭಾಗದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ ಮತ್ತು ಘೋಷ್ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಯಾಗಿದ್ದ. ಇಬ್ಬರೂ ಮುಖ್ಯ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು. ಇದೇ ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಹಾರಿ ಸ್ವಪ್ನೋದೀಪ್ ಸಾವಿಗೆ ಶರಣಾಗಿದ್ದಾನೆ. ಬಾಲ್ಕನಿಯಿಂದ ಬಿದ್ದ ವಿದ್ಯಾರ್ಥಿಯ ಶವ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ ಸಾಯುವ ಮೊದಲು "ನಾನು ಸಲಿಂಗಕಾಮಿ ಅಲ್ಲ" ಎಂದು ಪದೇ ಪದೇ ಹೇಳುತ್ತಿದ್ದನು ಎಂದು ತಿಳಿದುಬಂದಿದೆ.
ಶುಕ್ರವಾರ ಬಂಗಾಳ ಪೊಲೀಸರು ಸೌರವ್ ಚೌಧರಿಯನ್ನು ಬಂಧಿಸಿದ್ದಾರೆ ಮತ್ತು ಆತನ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಶನಿವಾರ ಬೆಳಿಗ್ಗೆ ಹಾಸ್ಟೆಲ್‌ನ ಇನ್ನೂ 12 ವಿದ್ಯಾರ್ಥಿಗಳು ಕರೆಸಿದರು ಮತ್ತು ಇಡೀ ರಾತ್ರಿ ವಿಚಾರಣೆ ನಡೆಸಿದರು. ವಿಚಾರಣೆಯ ಸಮಯದಲ್ಲಿ ಸೌರವ್ ಚೌಧರಿ, ರ್ಯಾಗಿಂಗ್ನಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾನೆ.
ಇಡೀ ಘಟನೆಯನ್ನು ಕಣ್ಣಾರೆ ಕಂಡ ಮತ್ತೊಬ್ಬ ವಿದ್ಯಾರ್ಥಿ ಸ್ವಪ್ನೋದೀಪ್ ಬಾಲ್ಕನಿಯಿಂದ ಜಿಗಿಯಲು ಬಂದಾಗ ಆತನನ್ನು ರಕ್ಷಿಸಲು ಯತ್ನಿಸಿದ್ದಾನೆ. ಆದರೆ, ಸ್ವಪ್ನೋದೀಪ್ ಕೈ ಹಿಡಿಯಲು ಯತ್ನಿಸಿದನಾದರೂ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಸ್ವಪ್ನೋದೀಪ್ ತನ್ನ ಹಾಸ್ಟೆಲ್‌ನಲ್ಲಿರುವ ಹಿರಿಯರಿಗೆ ಮೂರು ದಿನಗಳಲ್ಲಿ ಎರಡು ಬಾರಿ ತನ್ನನ್ನು ಪರಿಚಯಿಸಿಕೊಳ್ಳಬೇಕಾಗಿತ್ತು ಎಂದು ಮೂಲಗಳು ತಿಳಿಸಿವೆ. ಇದೀಗ ರ್ಯಾಗಿಂಗ್ ಭೂತಕ್ಕೆ ಯುವಕನೊಬ್ಬ ಬಲಿಯಾಗಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ. (ಏಜೆನ್ಸೀಸ್)