

ಭೋಪಾಲ್: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಪರಿಣಾಮ ಇಬ್ಬರು ಮೃತಪಟ್ಟು, 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ನರ್ಸಿಂಗ್ಪುರ ಜಿಲ್ಲೆಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 25ರಲ್ಲಿ ಘಟನೆ ನಡೆದಿದ್ದು, ಬಸ್ ಮುಂಬದಿ ಬೈಕ್ ಅಡ್ಡ ಬಂದ ಕಾರಣ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರಿಜು ಭಾಫ್ನಾ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
44 ಪ್ರಯಾಣಿಕರಿದ್ದ ಬಸ್ ನರ್ಸಿಂಗ್ಪುರದಿಂದ ಗದರ್ವಾರಾ ಪ್ರದೇಶಕ್ಕೆ ತೆರಳುತ್ತಿತ್ತು. ರಾಷ್ಟ್ರೀಯ ಹೆದ್ದಾರಿ 26 ಪ್ರವೇಶಿಸುತ್ತಿದ್ದಂತೆ ಬಸ್ಗೆ ಬೈಕ್ ಅಡ್ಡ ಬಂದಿದ್ದು, ಅಪಘಾತ ತಪ್ಪಿಸಲು ಹೋಗಿ ಚಾಲಕ ಸರ್ವೀಸ್ ರೋಡ್ನತ್ತ ತಿರುಗಿಸಿದ್ದಾನೆ. ಈ ವೇಳೆ ಬಸ್ ಚಾಲಕ ನಿಯಂತ್ರಣ ತಪ್ಪಿದ್ದು, ಸ್ಕಿಡ್ ಆಗಿ ಪಲ್ಟಿ ಹೊಡೆದಿದೆ.
ಘಟನೆಯಲ್ಲಿ ಪುಷ್ಪೇಂದ್ರ ವಿಶ್ವಕರ್ಮ(25) ಹಾಗೂ ದೇವೇಂದ್ರ ಜಾಥವ್(05) ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.