ನಾಯಿಗಳಿಂದ ತಪ್ಪಿಸಿಕೊಳ್ಳುವ ವೇಳೆ ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಮಕ್ಕಳು ಸಾವು

dog
Published on

ಜೋಧಪುರ: ಅಟ್ಟಾಡಿಸಿಕೊಂಡು ಬಂದಿದ್ದ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ಸಮಯದಲ್ಲಿ ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಶಾಲಾ ಮಕ್ಕಳು ಮೃತಪಟ್ಟಿರುವ ಘಟನೆ ಇಲ್ಲಿನ ಬನಾರ್‌ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಅನನ್ಯ ಕನ್ವರ್ (9) ಮತ್ತು ಯುವರಾಜ್ ಸಿಂಗ್ (11) ಎಂದು ಗುರುತಿಸಲಾಗಿದೆ.

ಮೃತ ಮಕ್ಕಳು ಬನಾರ್ ಪ್ರದೇಶದ ಗಣೇಶಪುರ ನಿವಾಸಿಗಳಾಗಿದ್ದು, ಆರ್ಮಿ ಚಿಲ್ಡ್ರನ್ ಅಕಾಡೆಮಿಯಲ್ಲಿ 5 ಮತ್ತು 7 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಸೋದರ ಸಂಬಂಧಿಗಳಾದ ಇಬ್ಬರು ಮಕ್ಕಳು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಮಾರ್ಗ ಮಧ್ಯೆ ಸಾಕು ನಾಯಿಗಳು ಅಟ್ಟಿಸಿಕೊಂಡು ಬಂದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಭಯಭೀತರಾದ ಮಕ್ಕಳು ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡಲು ಪ್ರಾರಂಭಿಸಿದ್ದರು. ಆದರೆ, ಈ ವೇಳೆ ರೈಲು ಬರುವುದನ್ನು ಗಮನಿಸದೆ ಅವರು ರೈಲ್ವೆ ಹಳಿಗಳ ಮೇಲೆ ಪ್ರವೇಶಿಸಿದ್ದಾರೆ, ಕೆಲವೇ ಕ್ಷಣಗಳಲ್ಲಿ ಗೂಡ್ಸ್​​ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿ ಮೃತರ ಪೋಷಕರು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ನಾಯಿಗಳನ್ನು ಹಿಡಿಯುವವರೆಗೂ ಶವ ಪಡೆಯುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕೆಲ ಸಮಯದಲ್ಲೇ ಜೋಧಪುರ ನಗರಸಭೆಯ ಶ್ವಾನದಳದ ಸಿಬ್ಬಂದಿ ನಾಯಿಗಳನ್ನು ಹಿಡಿದಿದ್ದಾರೆ. ನಾಯಿ ಮಾಲೀಕರ ವಿರುದ್ಧ ಅಗತ್ಯ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net