

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ರಾತ್ರಿ ಬಂಧಿತರಾಗಿರುವ ಜೈಷ್ ಏ ಮೊಹಮ್ಮದ್ ಸಂಘಟನೆಯ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಶುಕ್ರವಾರ ಪಟಿಯಾಲಾ ಕೋರ್ಟ್ಗೆ ಹಾಜರುಪಡಿಸಿದ್ದಾರೆ. ಕೋರ್ಟ್ ಅವರನ್ನು 5 ದಿನಗಳ ಪೊಲೀಸ್ ರಿಮಾಂಡ್ಗೆ ಒಪ್ಪಿಸಿದೆ.
ಇಬ್ಬರು ಉಗ್ರರ ಫೋನ್ ಕರೆಗಳ ದಾಖಲೆಗಳನ್ನು ಪರಿಶೋಧಿಸಿದಾಗ ಮೂರನೇ ಉಗ್ರನೂ ದೆಹಲಿಯಲ್ಲಿ ಇರುವುದು ಖಚಿತವಾಗಿದೆ. ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂಬ ಅಂಶವನ್ನು ಕೋರ್ಟ್ ಗಮನಕ್ಕೆ ತರಲಾಗಿದೆ. ಕೂಡಲೇ ಬಂಧಿತ ಉಗ್ರರನ್ನು ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಬಿಡುವಂತೆ ಕೋರ್ಟ್ ನಿರ್ದೇಶನ ನೀಡಿದೆ.
ಸೋಮವಾರ ದೆಹಲಿಯ ಮಿಲೆನಿಯಮ್ ಪಾರ್ಕ್ ಸಮೀಪ ಲತೀಫ್ ಮತ್ತು ಅಶ್ರಫ್ ಎಂಬ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದರು. ದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗಿದ ಬಳಿಕ ಪಾಕಿಸ್ತಾನಕ್ಕೆ ತೆರಳಿ ತಲೆಮರೆಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಲತೀಫ್ ಬಾರಾಮುಲ್ಲಾ ಜಿಲ್ಲೆಯವನಾದರೆ, ಅಶ್ರಫ್ ಕುಪ್ವಾರಾ ಜಿಲ್ಲೆಯವನು. (ಏಜೆನ್ಸೀಸ್)