

Saif Attacker: ಕಳೆದ ವಾರ ಅಪರಿಚಿತ ವ್ಯಕ್ತಿಯಿಂದ ತಮ್ಮ ಮನೆಯಲ್ಲೇ ಚಾಕು ದಾಳಿಗೆ ಒಳಗಾಗಿ, ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟ ಸೈಫ್ ಅಲಿ ಖಾನ್, ಇದೀಗ ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ನಟನ ಮೇಲೆ ದಾಳಿ ಮಾಡಿದವರು ಯಾರು? ಯಾವ ಕಾರಣಕ್ಕಾಗಿ ಸೈಫ್ ಮನೆಯೊಳಗೆ ನುಗ್ಗಿ ಚಾಕು ಇರಿದರು ಎಂಬುದು ಸದ್ಯ ಗೊಂದಲವಾಗಿಯೇ ಉಳಿದಿದೆ.
ಈಗಾಗಲೇ ಆರೋಪಿ ಸೈಫ್ ಅಲಿ ಖಾನ್ ಮನೆಯೊಳಗೆ ಪ್ರವೇಶಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಬ್ಬ ಸ್ಟಾರ್ ನಟನ ಮೇಲೆ ನಡೆದಿರುವ ಇಂತಹ ಭೀಕರ ದಾಳಿಯನ್ನು ಖಂಡಿಸಿರುವ ಹೆಸರಾಂತ ಸೆಲೆಬ್ರಿಟಿಗಳು, ಇದರ ತನಿಖೆ ಚುರುಕಾಗಿ ಸಾಗಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪೊಲೀಸರಲ್ಲಿ ಒತ್ತಾಯಿಸಿದ್ದಾರೆ. ಸದ್ಯ ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಮುಂಬೈ ಪೊಲೀಸರ ಪಡೆ, ತನಿಖೆಯ ಆಳ-ಅಗಲವನ್ನು ಬಹಳ ಸೂಕ್ಷ್ಮವಾಗಿ ಅರಿಯಲು ಪ್ರಯತ್ನಿಸುತ್ತಿದ್ದಾರೆ.
ಚುರುಕು ತನಿಖೆಯಲ್ಲಿ ಪೊಲೀಸರಿಗೆ ಬಲವಾದ ಸಾಕ್ಷಿಯೊಂದು ಲಭಿಸಿದ್ದು, ಸೈಫ್ಗೆ ಚಾಕು ಇರಿದ ವ್ಯಕ್ತಿ ಮೂಲತಃ ಬಾಂಗ್ಲಾದೇಶಿ ಎಂದು ಹೇಳಲಾಗಿದೆ. ಹಲ್ಲೆ ನಡೆಸಿದ ಆರೋಪಿ ಸರಿಫುಲ್ ಇಸ್ಲಾಂನ ರಾಷ್ಟ್ರೀಯತೆಯನ್ನು ಸಾಬೀತುಪಡಿಸುವ ಎರಡು ಗುರತಿನ ಚೀಟಿಗಳನ್ನು ಪಡೆದುಕೊಂಡಿದ್ದಾನೆ. ಕಳೆದ ವರ್ಷ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಸರಿಫುಲ್ಲಾ ಇಸ್ಲಾಂ, ತನ್ನ ಹೆಸರನ್ನು ಬದಲಿಸಿ ಬಿಜೋಯ್ ದಾಸ್ ಎಂದು ಗುರುತಿಸಿಕೊಂಡಿದ್ದ. ಸದ್ಯ ಆರೋಪಿಯನ್ನು ಈಗ ಬಂಧಿಸಲಾಗಿದೆ.
ಆರೋಪಿ ಸರಿಫುಲ್ಲಾನನ್ನು (30) ಮೂರು ದಿನಗಳ ನಂತರ ಪೊಲೀಸರು ಬಂಧಿಸಿ ಈಗ ವಿಚಾರಣೆಗೆ ಒಳಪಡಿಸಿದ್ದಾರೆ. ಮೊದಲಿನಿಂದಲೂ ಈತನ ಚಲನವಲನದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಖಾಕಿ ಪಡೆ, ಸರಿಫುಲ್ಲ ಒಬ್ಬ ಬಾಂಗ್ಲಾದೇಶಿ ಎಂಬುದನ್ನು ಈ ಮೊದಲೇ ಅರಿತಿದ್ದರು. ಆದರೆ, ಸರಿಯಾದ ಪುರಾವೆಗಳಿಗಾಗಿ ಕಾಯುತ್ತಿದ್ದರು. ಕಡೆಗೂ ಅದಕ್ಕೆ ಎರಡು ಬಲವಾದ ಸಾಕ್ಷಿಗಳು ಲಭಿಸಿದ್ದು, ಪೊಲೀಸರ ಶಂಕೆಯನ್ನು ನಿಜವಾಗಿಸಿದೆ. ಎರಡು ಬಹುಮುಖ್ಯ ದಾಖಲೆಗಳನ್ನು ಹೊಂದಿದ್ದ ಆರೋಪಿ, ಗುರುತಿನ ಚೀಟಿ ಮತ್ತು ಡ್ರೈವಿಂಗ್ ಲೈಸನ್ಸ್ ಅನ್ನು ಬಳಸಿಕೊಂಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಮೊದಲನೆಯದು ರಾಷ್ಟ್ರೀಯ ಗುರುತಿನ ಚೀಟಿಯಾಗಿದ್ದು, ಅದರಲ್ಲಿ ಶರೀಫುಲ್ ಮಾರ್ಚ್ 3, 1994ರಂದು ಜನಿಸಿದರು ಮತ್ತು ಅವರು ಮೊಹಮ್ಮದ್ ರುಹುಲ್ ಇಸ್ಲಾಂ ಅವರ ಮಗ ಎಂದು ಚೀಟಿಯಲ್ಲಿ ಉಲ್ಲೇಖವಾಗಿದೆ. ಎರಡನೇ ದಾಖಲೆಯು ಚಾಲನಾ ಪರವಾನಗಿಯಾಗಿದ್ದು, ಇದು ಶರೀಫುಲ್ ದಕ್ಷಿಣ-ಮಧ್ಯ ಬಾಂಗ್ಲಾದೇಶದ ಬರಿಸಲ್ ನಗರದ ನಿವಾಸಿ ಎಂದು ಬಹಿರಂಗಪಡಿಸುತ್ತದೆ. ಪರವಾನಗಿಯನ್ನು ನವೆಂಬರ್ 2019ರಲ್ಲಿ ನೀಡಲಾಗಿದ್ದು, ಫೆಬ್ರವರಿ 2020ರಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಶಾಶ್ವತ ಪರವಾನಗಿಗಾಗಿ ಅವರ ಲಿಖಿತ, ಮೌಖಿಕ ಮತ್ತು ಪ್ರಾಯೋಗಿಕ ಪರೀಕ್ಷೆಯ ದಿನಾಂಕವನ್ನು ಮಾರ್ಚ್ 18, 2020ಕ್ಕೆ ನಿಗದಿಪಡಿಸಲಾಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ,(ಏಜೆನ್ಸೀಸ್).