ಬೇಲಿಯೇ ಎದ್ದು ಹೊಲ ಮೇಯ್ದಾಗ; ಚಿನ್ನ ಸ್ಮಗ್ಲಿಂಗ್​ನಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಅಂದರ್!

golden police
Published on

ತಿರುವನಂತಪುರಂ: ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಕಸ್ಟಮ್ಸ್ ಅಧಿಕಾರಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿದೆ. ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಘಟಕದ ಅಧಿಕಾರಿಗಳಾದ ಅನೀಶ್ ಮುಹಮ್ಮದ್ ಮತ್ತು ನಿತಿನ್ ಎಂಬ ಅಧಿಕಾರಿಗಳು ಪ್ರಸ್ತುತ ಡಿಆರ್‌ಐ ವಶದಲ್ಲಿದ್ದಾರೆ.

ವಿಮಾನ ನಿಲ್ದಾಣದ ಮೂಲಕ ಸುಮಾರು 80 ಕೆಜಿ ಚಿನ್ನವನ್ನು ಸಾಗಿಸಲು ಇವರಿಬ್ಬರು ಕಳ್ಳಸಾಗಣೆ ದಂಧೆಗೆ ಸಹಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ನಡೆದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದಲ್ಲಿ ಇವರಿಬ್ಬರೂ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ಡಿಆರ್‌ಐ ಇಬ್ಬರನ್ನು ಬಂಧಿಸಿತ್ತು. ಕೆಲ ದಿನಗಳ ಹಿಂದೆ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಅಕ್ರಮವಾಗಿ ಸಾಗಿಸಲಾಗಿದ್ದ 4.8 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಕಸ್ಟಮ್ಸ್ ಲಗೇಜ್ ಅನ್ನು ತೆರವುಗೊಳಿಸಿದ್ದರೂ ಡಿಆರ್​ಐ, ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ವಶಪಡಿಸಿಕೊಂಡಿದೆ.

ಇದರ ಬೆನ್ನಲ್ಲೇ ಚಿನ್ನಾಭರಣ ದಂಧೆಕೋರರು ಕಸ್ಟಮ್ಸ್ ಕಚೇರಿಗೆ ಆಗಮಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಅವರು ಅನೀಶ್ ಮತ್ತು ನಿತಿನ್ ಜೊತೆಗಿನ ಫೋನ್ ಸಂಭಾಷಣೆಯನ್ನೂ ಸೋರಿಕೆ ಮಾಡಿದರು.

ತದನಂತರ ಡಿಆರ್‌ಐ ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈವಾಡವನ್ನು ದೃಢಪಡಿಸಿ ಅವರ ವಿರುದ್ಧ ಕ್ರಮ ಕೈಗೊಂಡಿದೆ. ಡಿಆರ್‌ಐ ತನಿಖಾ ತಂಡ ಇಬ್ಬರ ವಿಚಾರಣೆ ನಡೆಸುತ್ತಿದೆ. ಇನ್ನಿಬ್ಬರು ಅಧಿಕಾರಿಗಳ ಬಂಧನವನ್ನು ಶೀಘ್ರವೇ ದಾಖಲಿಸಲಾಗುವುದು ಎಂದು ಕೇರಳದ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net