ಸಿಂಗಾಪುರದಲ್ಲಿ ರೆಸ್ಟೋರೆಂಟ್ ಆಸೆ ತೋರಿಸಿ 2 ಕೋಟಿ ರೂ. ಧೋಖಾ

cyber crime
Published on

ಬೆಂಗಳೂರು: ಸಿಂಗಾಪುರದ ರೆಸ್ಟೋರೆಂಟ್ ಉದ್ಯಮದಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭಾಂಶದ ಆಮಿಷ ಒಡ್ಡಿ 2 ಕೋಟಿ ರೂ. ಪಡೆದು ಮೋಸ ಮಾಡಿದ್ದಾರೆ.

ಸುಂಕದಕಟ್ಟೆಯ ಜೆ. ನವೀನ್, ಈ ಕುರಿತು ಹಲಸೂರು ಗೇಟ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಸ್ಯಾಮ್ ಥಾಮಸ್, ಕಲ್ಯಾಣ ಮುರುಗನ್, ಜೋಸ್ೆ ಕುರುವಿಲ್ಲಾ, ಜೀನ್ ಕಮಲ್ ಮತ್ತು ದೀಪಕ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನ. 11ರಂದು ಸ್ನೇಹಿತರ ಮೂಲಕ ನವೀನ್ ಅವರಿಗೆ ಆರೋಪಿಗಳು ಪರಿಚಯವಾಗಿದ್ದಾರೆ. ಈ ಪೈಕಿ ಸ್ಯಾಮ್ ಥಾಮಸ್ ಎಂಬಾತ ಸಿಂಗಾಪುರದಲ್ಲಿ ರೆಸ್ಟೋರೆಂಟ್ ಉದ್ಯಮ ನಡೆಸುತ್ತಿದ್ದೇನೆ. ಇದರಲ್ಲಿ 2 ಕೋಟಿ ರೂ. ಹೂಡಿಕೆ ಮಾಡಿದರೆ ವಾಪಸ್ 3 ಕೋಟಿ ರೂ. ಲಾಭಾಂಶ ಕೊಡುವುದಾಗಿ ಭರವಸೆ ನೀಡಿದ್ದರು. ಇದನ್ನು ನಂಬಿದ ನವೀನ್, ಮನೆ, ಕಾರ್ಖಾನೆ ಶೆಡ್ ಮೇಲೆ 2 ಕೋಟಿ ರೂ. ಸಾಲ ಪಡೆದು ದೀಪಕ್ ಎಂಬಾತನಿಗೆ ಕೊಟ್ಟಿದ್ದರು.

ಹಣ ಪಡೆದ ಆರೋಪಿಗಳು, ತಕ್ಷಣವೇ 9,438 ರೂ. ಅನ್ನು ಲಾಭಾಂಶ ಎಂದು ದೂರುದಾರರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ಮತ್ತೆ ನಿಮ್ಮ ಬ್ಯಾಂಕ್ ಖಾತೆಗೆ 3 ಕೋಟಿ ರೂ. ಲಾಭಾಂಶ ಕೊಡುವುದಾಗಿ ಭರವಸೆ ಕೊಟ್ಟು ಅಲ್ಲಿಂದ ಹೊರಟು ಹೋಗಿದ್ದರು. ಸ್ವಲ್ಪ ದಿನಗಳ ಬಳಿಕ ಆರೋಪಿಗಳಿಗೆ ಕರೆ ಮಾಡಿದಾಗ, ಸಂಪರ್ಕಕ್ಕೆ ಲಭ್ಯವಾಗಿಲ್ಲ. ಕೊನೆಗೆ ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿ ನವೀನ್ ಬಂದು ದೂರು ಸಲ್ಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net