2 ಕೋಟಿ ರೂ. ವಂಚಿಸಿದ್ದ ಏಳು ಮಂದಿ ಸೆರೆ

arrest (1)
Published on

ಬೆಂಗಳೂರು : ಮಲೇಷಿಯಾದ ಹೋಟೆಲ್ ಉದ್ಯಮದಲ್ಲಿ 2 ಕೋಟಿ ರೂ. ಹೂಡಿಕೆ ಮಾಡಿದರೆ 3.50 ಕೋಟಿ ರೂ. ಕೊಡುವುದಾಗಿ ಆಮಿಷವೊಡ್ಡಿ ವಂಚಿಸಿದ್ದ ಏಳು ಆರೋಪಿಗಳನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಶ್ಯಾಮ್ ಥಾಮಸ್ (59), ಜೋಶ್ ಎಂ. ಕುರುವಿಲ್ಲಾ (62), ಜೆ.ಪಿ.ನಗರದ ಜೀನ್ ಕಮಲ್ (45), ಉರ್ವಶಿ ಗೋಸ್ವಾಮಿ ಅಲಿಯಾಸ್ ಸೋನು (34), ಕೋರಮಂಗಲದ ಜಾರ್ ಸಾದಿಕ್ (39), ವಿದ್ಯಾರಣ್ಯಪುರದ ಅಮಿತ್ ಮಹೇಶ್ ಗಿಡ್ವಾನಿ (40) ಮತ್ತು ಮಹಾರಾಷ್ಟ್ರದ ವಿಜಯ್ ವಾಮನ್ ಚಿಪ್ಲೂಂಕರ್ (45) ಬಂಧಿತರು. ಇವರಿಂದ ಐದು ಮೊಬೈಲ್ ಹಾಗೂ 44 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ದೆಹಲಿ, ಗುಜರಾತ್ ಮೂಲದ ಐವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಂಕದಕಟ್ಟೆಯ ಶ್ರೀನಿವಾಸನಗರದ ಡಿ.11ರಂದು ಪರಿಚಯವಾದ ಆರೋಪಿಗಳು ಮಲೇಷಿಯಾದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದು, ಬಂಡವಾಳ ಬೇಕಾಗಿದೆ. 2 ಕೋಟಿ ರೂ. ಹೂಡಿಕೆ ಮಾಡಿದರೆ ನಿಮಗೆ ಎರಡೇ ದಿನಕ್ಕೆ 3.50 ಕೋಟಿ ರೂ. ವಾಪಸ್ ಕೊಡುವುದಾಗಿ ನಂಬಿಸಿದ್ದರು. ಇದನ್ನು ನಂಬಿದ ದೂರುದಾರ, ನಗದು ಮತ್ತು ಆರ್‌ಟಿಜಿಎಸ್‌ನಲ್ಲಿ 2 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಹಣ ಪಡೆದ ಆರೋಪಿಗಳು, ಲಾಭಾಂಶ ಎಂದು 9,780 ರೂ. ವರ್ಗಾವಣೆ ಮಾಡಿ ಅಲ್ಲಿಂದ ಪರಾರಿಯಾಗಿದ್ದರು.

ಈ ಬಗ್ಗೆ ನೊಂದ ದೂರುದಾರ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಹಲಸೂರು ಗೇಟ್ ಠಾಣೆ ಪೊಲೀಸರು, ಮೆಜೆಸ್ಟಿಕ್‌ನಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಂಚನೆ ಮಾಡಿರುವುದು ಒಪ್ಪಿಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕೊಟ್ಟ ಮಾಹಿತಿ ಮೇರೆಗೆ ಉಳಿದ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net