

ಬೆಂಗಳೂರು: ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಕರೆ ಮಾಡಿ ಹೊಸ ಮೊಬೈಲ್ ಗಿಫ್ಟ್ ಕಳುಹಿಸಿ, ಅವರ ಬ್ಯಾಂಕ್ ಖಾತೆಯಿಂದ 2.80 ಕೋಟಿ ರೂ. ದೋಚಿದ್ದಾರೆ.
ವೈಟ್‌ಫೀಲ್ಡ್ ನಿವಾಸಿ ದೇಬಾಶಿಷ್ ರಾಯ್ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ವೈಟ್‌ಫೀಲ್ಡ್ ವಿಭಾಗದ ಸಿಇಎನ್ ಪೊಲೀಸರು, ಆರೋಪಿ ಮೋಹಿತ್ ಜೈನ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಳೆದ ನ. 27ರಂದು ದೇಬಾಶಿಷ್‌ಗೆ ವಾಟ್ಸ್‌ಆ್ಯಪ್ ಕರೆ ಮಾಡಿದ ಮೋಹಿತ್ ಜೈನ್, ಸಿಟಿ ಬ್ಯಾಂಕ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ, ‘ನಿಮಗೆ ಫ್ರೀ ಕ್ರೆಡಿಟ್ ಕಾರ್ಡ್ ಅಪ್ರೂವಲ್ ಆಗಿದೆ. ಏರ್‌ಟೆಲ್ ಶಾಪ್‌ಗೆ ತೆರಳಿ ನಿಮ್ಮ ಮೊಬೈಲ್ ಸಂಖ್ಯೆಗೆ ಹೊಸ ಸಿಮ್ ಕಾರ್ಡ್ ಖರೀದಿಸಿ’ ಎಂದು ಸೂಚಿಸಿದ್ದ. ಅದರಂತೆ ದೇಬಾಶಿಷ್ ಹೊಸ ಸಿಮ್ ಖರೀದಿಸಿದ್ದ. ಡಿ. 1ರಂದು ಸಿಟಿ ಯೂನಿಯನ್ ಬ್ಯಾಂಕ್ ಹೆಸರಿನಲ್ಲಿ ದೇಬಾಶಿಷ್ ವಿಳಾಸಕ್ಕೆ ರೆಡ್‌ಮೀ 13 ಸಿ ಮೊಬೈಲ್ ಪಾರ್ಸೆಲ್ ಕಳುಹಿಸಿದ್ದರು. ಆ ಮೊಬೈಲ್‌ಗೆ ಹೊಸ ಸಿಮ್ ಕಾರ್ಡ್ ಹಾಕಿ ಆ್ಯಕ್ಟಿವೇಟ್ ಮಾಡಿದಾಗ ಯಾವುದೇ ಇ-ಮೇಲ್, ಸಂದೇಶಗಳು ಬಂದಿಲ್ಲ. ಈ ಬಗ್ಗೆ ಅನುಮಾನಗೊಂಡ ದೇಬಾಶಿಷ್ ಡಿ.5ರಂದು ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಎರಡು ಖಾತೆಗಳಿಂದ ಹಂತ ಹಂತವಾಗಿ 2.80 ಕೋಟಿ ರೂ. ಕಡಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊನೆಗೆ ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದು ದೇಬಾಶಿಷ್, ವೈಟ್‌ಫೀಲ್ಡ್ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ತನಿಖೆಗೆ ಆರಂಭಿಸಿರುವ ಪೊಲೀಸರು, ವಂಚಕರು ದೇಬಾಶಿಷ್‌ಗೆ ಕಳುಹಿಸಿದ್ದ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ದೇಬಾಶಿಷ್ ಬ್ಯಾಂಕ್ ಖಾತೆಗಳಿಂದ ಯಾವ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಿ ಸೈಬರ್ ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.
ಮೊಬೈಲ್ ಕ್ಲೋನಿಂಗ್
ಸೈಬರ್ ವಂಚಕರು ಗಿಫ್ಟ್ ರೂಪದಲ್ಲಿ ಕಳುಹಿಸಿದ್ದ ಮೊಬೈಲ್ ಅನ್ನು ಕ್ಲೋನಿಂಗ್ ಮತ್ತು ಕೆಲ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿದ್ದರು. ದೇಬಾಶಿಷ್ ಮೊಬೈಲ್‌ಗೆ ಸಿಮ್ ಕಾರ್ಡ್ ಹಾಕಿ ಆ್ಯಕ್ಟಿವೇಟ್ ಮಾಡುತ್ತಿದ್ದಂತೆ ಸೈಬರ್ ವಂಚಕರು ಆ ಮೊಬೈಲ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಬ್ಯಾಂಕ್ ಖಾತೆಯಲ್ಲಿದ್ದ 2.80 ಕೋಟಿ ರೂ. ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಹಣ ಕಡಿತವಾದಾಗ ದೇಬಾಶಿಷ್ ಮೊಬೈಲ್‌ಗೆ ಇ-ಮೇಲ್, ಮೊಬೈಲ್ ಸಂದೇಶ ಹೋಗದಂತೆ ಸೆಟ್ ಮಾಡಿದ್ದರು ಎಂಬುದು ಪೊಲೀಸರಿಗೆ ಗೊತ್ತಾಗಿದೆ.