

ನಂಜನಗೂಡು: ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ 2.14 ಕೋಟಿ ರೂ. ನಗದು ಲಭ್ಯವಾಗಿದೆ.
ಶುಕ್ರವಾರ ಬೆಳಗಿನಿಂದ ಸಂಜೆವರೆಗೆ ನಡೆದ ಹುಂಡಿ ಹಣ ಪರ್ಕಾವಣೆಯಲ್ಲಿ ದೇಗುಲದ 35 ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಯಿತು. ಈ ಸಂದರ್ಭ 2,14,52,984 ರೂ. ನಗದು, 98 ಗ್ರಾಂ 600 ಮಿಲಿ ಚಿನ್ನ, 4,500 ಗ್ರಾಂ ಬೆಳ್ಳಿ ಹಾಗೂ 190 ವಿದೇಶಿ ಕರೆನ್ಸಿ ಲಭ್ಯವಾಗಿದೆ.
ಕಾರ್ತಿಕ ಮಾಸದ ಸೋಮವಾರಗಳಂದು ಸಹಸ್ರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರಿಂದ ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಿದೆ ಎಂದು ದೇವಾಲಯದ ಅಧಿಕಾರಿಗಳು ಅಂದಾಜಿಸಿದ್ದಾರೆ.
ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ಮಾರ್ಗದರ್ಶನದಲ್ಲಿ ನಡೆದ ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಮುಜರಾಯಿ ತಹಸೀಲ್ದಾರ್ ವಿದ್ಯುಲ್ಲತಾ, ತಲಕಾಡು ವೈದ್ಯನಾಥೇಶ್ವರ ದೇವಾಲಯದ ಇಒ ವೆಂಕಟೇಶ್ ಪ್ರಸಾದ್, ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಇಒ ಜಗದೀಶ್ ಕುಮಾರ್, ಎಇಒ ಸತೀಶ್, ಲೆಕ್ಕಾಧೀಕ್ಷಕ ಗುರುಮಲ್ಲಯ್ಯ, ಬಿಒಬಿ ಮ್ಯಾನೇಜರ್ ಟಿ.ಕೆ.ನಾಯಕ್, ಸ್ತ್ರೀ ಶಕ್ತಿ ಸಂಘದ ಮಹಿಳೆಯರು, ದೇವಾಲಯದ ಸಿಬ್ಬಂದಿ ಇದ್ದರು.