

ಬಾಳೆಹೊನ್ನೂರು: ಮೇಲ್ಪಾಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 2.08 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಆರ್.ಪ್ರಕಾಶ್ ತಿಳಿಸಿದರು.
ಮೇಲ್ಪಾಲ್‌ನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಪಿಎಸಿಎಸ್ ಭಾನುವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಂಸ್ಥೆಯು ಶೇ.99ರಷ್ಟು ಸಾಲ ವಸೂಲಾತಿ ಮಾಡಿದೆ. ಸದಸ್ಯರಿಗೆ ಅವಶ್ಯಕತೆಯಿರುವ ವ್ಯವಸಾಯ ಸಲಕರಣೆಗಳು, ರಾಸಾಯನಿಕ ಗೊಬ್ಬರಗಳನ್ನು ಮಾರಾಟ ಮಾಡುತ್ತಿದ್ದು ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿ ಸಂಘದ ಮೂಲಕ ವ್ಯವಹಾರ ನಡೆಸಿ ಸಂಘವನ್ನು ಸುಭದ್ರಗೊಳಿಸಬೇಕು ಎಂದರು.
ಸಂಘದ ಸಿಇಒ ದಯಾನಂದ, ಸಂಘದಲ್ಲಿನ ವ್ಯವಹಾರಗಳು, ಸಂಘದಿಂದ ಸಿಗುವ ಸೌಲಭ್ಯಗಳು ಮತ್ತು ಗಳಿಸಿದ ಲಾಭಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಡಿ.ಸಂಪತ್ ಕುಮಾರ್, ನಿರ್ದೇಶಕರಾದ ಬಿದ್ದಪ್ಪ, ಕೆ.ಎ.ವಿವೇಕ್, ಕೆ.ಸಿ.ಜಯಪಾಲ್, ಎಚ್.ಎಸ್.ರಾಮಚಂದ್ರ, ಬಿ.ಡಿ.ಶ್ರುತಿ, ಎಂ.ನಾರಾಯಣ್, ಎಚ್.ಚಂದ್ರಶೇಖರ್, ಎಲ್.ಅಣ್ಣಪ್ಪ, ಎಚ್.ಆರ್.ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಎಂ.ಡಿ.ರಾಜೇಶ್, ಸಿಬ್ಬಂದಿ ಎಲ್.ರಂಜನ್ ಕುಮಾರ್, ಚಂದ್ರಶೇಖರ್ ಮತ್ತಿತರರು ಇದ್ದರು.