ಶಂಕಿತ ಕರೊ ನಾ ಸೋಂಕಿತಳನ್ನು ಕಂಬಳಿ ಸುತ್ತಿ ಬಸ್​​ನಿಂದ​ ಎಸೆದ ಚಾಲಕ-ನಿರ್ವಾಹಕ: ಮುಂದಾಗಿದ್ದು ದುರಂತ

Covid 4 Jul 20
Published on

ನೊಯ್ಡಾ: ಆಕೆ 19 ವರ್ಷದ ಯುವತಿ. ತನ್ನ ತಾಯಿಯೊಂದಿಗೆ ನೊಯ್ಡಾದಿಂದ ಫಿರೋಜಾಬಾದ್​​ನಲ್ಲಿರುವ ಶಿಕೋಹಾಬಾದ್​ಗೆ ತೆರಳುತ್ತಿದ್ದಳು. ಆದರೆ ಮಾರ್ಗಮಧ್ಯೆ ಆಕೆಯನ್ನು ಬಸ್​ ಕಂಡಕ್ಟರ್​ ಮತ್ತು ಚಾಲಕ ಸೇರಿ ಅಮಾನವೀಯವಾಗಿ ಕೆಳಕ್ಕೆ ಎಸೆದು, ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಈ ದುರ್ಘಟನೆ ಕಳೆದ ತಿಂಗಳು 15ನೇ ತಾರೀಖಿನಂದೇ ನಡೆದಿದೆ.

ಯುವತಿಯ ಹೆಸರು ಅಂಶಿಕಾ. ದೆಹಲಿಯ ಪಾಟ್​ಪರ್​ಗಂಜ್​​ ಏರಿಯಾದವಳು. ಅಂದು ಬಸ್​​ನಲ್ಲಿ ಪ್ರಯಾಣ ಮಾಡುತ್ತಿದ್ದ ಆಕೆಗೆ ಉಷ್ಣತೆಯಿಂದ ಬಳಲಿಕೆ ಉಂಟಾಗಿತ್ತು. ಇದರಿಂದಾಗಿ ಆಕೆ ಮೂರ್ಚೆ ಹೋದಳು. ಯುವತಿಯ ಸ್ಥಿತಿ ನೋಡಿದ ಬಸ್​ ನಿರ್ವಾಹಕ ಮತ್ತು ಚಾಲಕ ಆಕೆಗೆ ಕರೊನಾ ಸೋಂಕು ಇರಬಹುದು. ಹಾಗೆಯೇ ಬಿಟ್ಟರೆ ತಾವೆಲ್ಲ ಅಪಾಯಕ್ಕೆ ಸಿಲುಕಬೇಕಾಗುತ್ತದೆ ಎಂದು ಭಾವಿಸಿ, ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಟೋಲ್​ ಪ್ಲಾಜಾ ಬಳಿ ಆಕೆಯನ್ನು ಬಸ್​ನಿಂದ ಕೆಳಕ್ಕೆ ಎಸೆದಿದ್ದಾರೆ. ಆ ವೇಳೆ ಹೃದಯಸ್ತಂಭನಕ್ಕೆ ಒಳಗಾದ ಅಂಶಿಕಾ ಮೃತಪಟ್ಟಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಆದರೆ ಕುಟುಂಬಸ್ಥರ ದೂರನ್ನು ಮಥುರಾ ಪೊಲೀಸರು ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಿಗೆ ಯುವತಿಯನ್ನು ಉಳಿದ ಪ್ರಯಾಣಿಕರಂತೆ ಕೆಳಗಿಳಿಸಿದ್ದಾರೆ ಹೊರತು, ಅಮಾನವೀಯವಾಗಿ ಎಸೆದ ಬಗ್ಗೆ ಪುರಾವೆಗಳೇ ಇಲ್ಲ ಎಂದು ಹೇಳಿದ್ದಾರೆ.

ಮೃತ ಯುವತಿಯ ಕುಟುಂಬದವರು ನಮ್ಮ ಠಾಣೆಗೆ ಬಂದು ದೂರು ನೀಡಿದರು. ನಾವು ಆಕೆಯ ದೇಹವನ್ನು ಪೋಸ್ಟ್ ಮಾರ್ಟಮ್​ಗೆ ಕಳಿಸಿದೆವು. ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ವರದಿ ಬಂದಿದೆ. ಯಾವುದೇ ಹಲ್ಲೆಯಾದ ಬಗ್ಗೆ ಉಲ್ಲೇಖವಿಲ್ಲ. ಇದು ಎಫ್​ಐಆರ್​ ದಾಖಲಿಸುವ ಪ್ರಕರಣ ಅಲ್ಲ. ಕರೊನಾ ವೈರಸ್​ ಭಯದಿಂದ ಬಸ್​ ಚಾಲಕ, ನಿರ್ವಾಹಕ ಆಕೆಯನ್ನು ಕೆಳಗೆ ಇಳಿಸಿದ್ದಾರೆ ಎಂದು ಸ್ಥಳೀಯ ಠಾಣೆ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಹಾರ್​ ಸಿಎಂಗೆ ಕರೊನಾ ಭೀತಿ; ಮುಖ್ಯಮಂತ್ರಿಯ ನಾಲ್ವರು ಕಾರ್ಯದರ್ಶಿಗಳಲ್ಲಿ ಸೋಂಕು ದೃಢ

ನೊಯ್ಡಾದಿಂದ ಬಸ್​ ಹತ್ತಿದ ಸಂದರ್ಭದಲ್ಲಿ ಆಕೆ ಆರೋಗ್ಯವಾಗಿಯೇ ಇದ್ದಳು. ಕರೊನಾ ಸೇರಿ ಯಾವುದೇ ಅನಾರೋಗ್ಯದ ಲಕ್ಷಣಗಳು ಇರಲಿಲ್ಲ. ಅಂಶಿಕಾಗೆ ಕಿಡ್ನಿಯಲ್ಲಿ ಕಲ್ಲು ಇತ್ತು. ಆದರೆ ಪ್ರಯಾಣದ ವೇಳೆ ಏಕಾಏಕಿ ಮೈಯಲ್ಲಿ ಉಷ್ಣತೆ ಪ್ರಮಾಣ ಹೆಚ್ಚಿ ಬಳಲಿದ್ದಾಳೆ. ಚಾಲಕ, ನಿರ್ವಾಹಕರು ಆಕೆಯನ್ನು ಕೆಳಕ್ಕೆ ಇಳಿಸಲಿಲ್ಲ. ಕಂಬಳಿಯಲ್ಲಿ ಸುತ್ತಿ ಎಸೆದಿದ್ದಾರೆ ಎಂದು ಅಂಶಿಕಾ ಸಹೋದರ ಶಿವ್ ತಿಳಿಸಿದ್ದಾರೆ. ಪೊಲೀಸರು ಕ್ರಮ ಕೈಗೊಂಡು, ಇಬ್ಬರ ವಿರುದ್ಧವೂ ಎಫ್​ಐಆರ್​ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net