VIDEO| ಸಂವಾದ ಕಾರ್ಯಕ್ರಮದಲ್ಲಿ ಬಿಆರ್​ಎಸ್​ ಶಾಸಕನಿಂದ ಬಿಜೆಪಿ ಅಭ್ಯರ್ಥಿಯ ಮೇಲೆ ಹಲ್ಲೆ

BRS BJP Fight
Published on

ಹೈದರಾಬಾದ್: ಮುಂದಿನ ಕೆಲವು ದಿನಗಳಲ್ಲಿ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಬಿಆರ್​ಎಸ್​, ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇದೀಗ ಘಟನೆಯೊಂದರಲ್ಲಿ ಆಡಳಿತರೂಢ ಬಿಆರ್​ಎಸ್​ ಪಕ್ಷದ ಶಾಸಕ ಬಿಜೆಪಿ ಅಭ್ಯರ್ಥಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಸುದ್ದಿ ವಾಹಿನಿಯೊಂದು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಇತ್ತ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಆರ್​ಎಸ್​ನ ಹತಾಶೆ ಹಾಗೂ ದುರಹಂಕಾರ ರಾಜಕಾರಣದ ಪರಮಾವಧಿ ಎಂದು ಬಿಜೆಪಿ ಕಿಡಿಕಾರಿದೆ.

ತೆಲಂಗಾಣದ ಕುತ್ಬುಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಆರ್​ಎಸ್​ ಅಭ್ಯರ್ಥಿ ಕೆಪಿ ವಿವೇಕಾನಂದ ಗೌಡ್ ಮತ್ತು ಬಿಜೆಪಿಯ ಕುನಾ ಶ್ರೀಶೈಲಂ ಗೌಡ್ ಸುದ್ದಿ ವಾಹಿನಿಯೊಂದರ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿಯ ಕುನಾ ಶ್ರೀಶೈಲಂ ಗೌಡ್ ಎದುರಾಳಿ ವಿರುದ್ಧ ಸರಣಿ ಆರೋಪಗಳನ್ನು ಮಾಡುತ್ತಾರೆ.

ಬಿಜೆಪಿ ಅಭ್ಯರ್ಥಿ ಮಾಡಿದ ಆರೋಪಗಳಿಂದ ಕುಪಿತಗೊಂಡ ಬಿಆರ್​ಎಸ್​ನ ಶಾಸಕ ವಿವೇಕಾನಂದ ಗೌಡ್​ ಏಕಾಏಕಿ ಕುನಾ ಶ್ರೀಶೈಲಂ ಗೌಡ್ ಮೇಲೆ ಹಲ್ಲೆಗೆ ಮುಂದಾಗಿದ್ದು, ಅವರ ಕತ್ತಿಗೆ ಕೈ ಹಾಕಿ ಎಳೆದಾಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ನಿರೂಪಕರು ಹಾಗೂ ಪೊಲೀಸರು ಮಧ್ಯಪ್ರವೇಶಿಸಿದ್ದು, ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ ಕಾರಣ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಯಿತು.

ಇತ್ತ ಬಿಆರ್​ಎಸ್​ನ ಶಾಸಕ ತಮ್ಮ ಪಕ್ಷದ ಅಭ್ಯರ್ಥಿ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿರುವ ರಾಜ್ಯ ಬಿಜೆಪಿ ಘಟಕ, ಸೋಲುವ ಹತಾಶೆಯಿಂದಾಗಿ ಬಿಆರ್​ಎಸ್​ನ ಶಾಸಕ ವಿವೇಕಾನಂದ ಗೌಡ್​ ಈ ರೀತಿ ಮಾಡಿದ್ದಾರೆ. ಗೂಂಡಾಗಳ ಪಕ್ಷದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಕಿಡಿಕಾರಿದೆ.

ಇದೇ ಮೊದಲಲ್ಲ

ಈ ಹಿಂದೆ ಬಿಆರ್​ಎಸ್​ನ ಶಾಸಕ ವಿವೇಕಾನಂದ ಗೌಡ್​ ತಲುಗು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಡೆಲಿವರಿ ಬಾಯ್​ ಒಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸುದ್ದಿಯಾಗಿದ್ದರು. ಚುನಾವಣೆಯ ಹೊಸ್ತಿಲಲ್ಲಿ ಎದುರಾಳಿ ಪಕ್ಷದ ಅಭ್ಯರ್ಥಿ ಮೇಲೆ ಹಲ್ಲೆಗೆ ಮುಂದಾಗಿರುವುದು ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಬಿಂಬಿತವಾಗಿದೆ. ನವೆಂಬರ್ 03ರಂದು ತೆಲಂಗಾಣದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net