

ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣದಲ್ಲಿರುವ ಎಟಿಎಂ ಬೂತ್‌ನಲ್ಲಿ ತಾಯಿ, ಮಗಳು ಹಣ ಡ್ರಾ ಮಾಡಲು ಹೋದಾಗ ಅಪರಿಚಿತ ವ್ಯಕ್ತಿ ಕಾರ್ಡ್ ಬದಲಾಯಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದಾನೆ.
ತ್ಯಾಗರಾಜನಗರದ ನಿವಾಸಿ ಶೋಭಾ ಹಣ ಕಳೆದುಕೊಂಡವರು. ಇವರು ಕೊಟ್ಟ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೋಭಾ, ತಮ್ಮ ಮಗಳನ್ನು ಕಾಲೇಜಿಗೆ ಸೇರಿಸುವ ಸಲುವಾಗಿ ಧಾರವಾಡಕ್ಕೆ ಹೋಗಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಟರ್ಮಿನಲ್-1ಕ್ಕೆ ಬಂದಿದ್ದರು. ಸಮೀಪದ ಎಟಿಎಂ ಬೂತ್‌ನಲ್ಲಿ ಹಣ ಡ್ರಾ ಮಾಡಲು ತಾಯಿ, ಮಗಳು ಹೋದಾಗ ಹಿಂದೆಯೇ ಅಪರಿಚಿತ ವ್ಯಕ್ತಿ ಬಂದು ನಿಂತಿದ್ದ. ಈ ಕಡೆ ತಾಯಿ, ಮಗಳು ಹಣ ಡ್ರಾ ಮಾಡಲು ಎಟಿಎಂ ಕಾರ್ಡ್ ಹಾಕಿ ಪ್ರಯತ್ನಿಸಿದಾಗ ಒಂದು ಬೂತ್‌ನಲ್ಲಿ ಡ್ರಾ ಆಗಲಿಲ್ಲ. ಅಷ್ಟೊತ್ತಿಗೆ ಅಪರಿಚಿತ ವ್ಯಕ್ತಿ, ಮತ್ತೊಂದು ಬೂತ್‌ನಲ್ಲಿ ಪ್ರಯತ್ನ ಮಾಡುವಂತೆ ಸಲಹೆ ಕೊಟ್ಟಿದ್ದ. ಕೈ ಜಾರಿ ಎಟಿಎಂ ಕಾರ್ಡ್ ಕೆಳಗೆ ಬಿದ್ದಿದ್ದು, ಅದನ್ನು ಅಪರಿಚಿತ ವ್ಯಕ್ತಿ ತೆಗೆದುಕೊಡುವಾಗ ಬದಲಾಯಿಸಿದ್ದ. ಬಸ್‌ಗೆ ಸಮಯವಾಗಿದ್ದರಿಂದ ತಾಯಿ, ಮಗಳು ಅಲ್ಲಿಂದ ಹೊರಟು ಧಾರವಾಡಕ್ಕೆ ಹೋಗಿದ್ದರು.
ಇತ್ತ ಎಟಿಎಂ ಕಾರ್ಡ್ ಕಳವು ಮಾಡಿದ್ದ ಅಪರಿಚಿತ ವ್ಯಕ್ತಿ, ಅದನ್ನು ಬಳಸಿ 10 ಸಾವಿರ ರೂ. ಮತ್ತು 8 ಸಾವಿರ ರೂ.ಗಳನ್ನು ಡ್ರಾ ಮಾಡಿಕೊಂಡಿದ್ದ. ತಾಯಿ, ಮಗಳು ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಮೆಜೆಸ್ಟಿಕ್‌ನಲ್ಲಿಯೇ ಅಪರಿಚಿತ ವ್ಯಕ್ತಿ ಮೋಸ ಮಾಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.