

ಕೋಲಾರ: ತಾಲೂಕಿನ ಅಮ್ಮನಲ್ಲೂರು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿನಿಲಯದಲ್ಲಿ 18 ಮಕ್ಕಳು ಶುಕ್ರವಾರ ಬೆಳಗ್ಗೆ ಉಪಾಹಾರ ಸೇವಿಸಿ ಅಸ್ವಸ್ಥಗೊಂಡಿದ್ದಾರೆ.
5ನೇ ತರಗತಿಯ ವಿಕ್ರಮ್, ಗೌತಮ್, 6ನೇ ತರಗತಿಯ ಸುಜನ್, ಅರವಿಂದ್, 7ನೇ ತರಗತಿಯ ಕಿಶೋರ್, ರಂಜಿತ್, ಕೋಮಲ್ ಕುಮಾರ್, ಮದನ್ ಕುಮಾರ್, 8ನೇ ತರಗತಿಯ ಮೋಹಿತ್, 9ನೇ ತರಗತಿಯ ಅಂಬರೀಶ್, ಅಜಯ್ ಕುಮಾರ್, ವಿವೇಕ್, ಮದನ್, ಮದನ್ ಕುಮಾರ್, 10ನೇ ತರಗತಿಯ ಸದಾನಂದ, ಸಾಯಿ ಚರಣ್, ಗಗನ್ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ಮೇಘನಾನಂದ ಅಸ್ವಸ್ಥಗೊಂಡವರು.
ವಿದ್ಯಾರ್ಥಿನಿಲಯದಲ್ಲಿ ಒಟ್ಟು 54 ಮಕ್ಕಳಿದ್ದು, ಎಲ್ಲರೂ ಶ್ರೀಚೌಡೇಶ್ವರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯ 5ರಿಂದ 10ನೇ ತರಗತಿಯ ವಿದ್ಯಾರ್ಥಿಗಳು. ವಸತಿನಿಲಯದಲ್ಲಿ ದಿನಕ್ಕೊಂದು ಉಪಾಹಾರ ನೀಡಲಾಗುತ್ತಿದೆ. ಎಂದಿನಂತೆ ಶುಕ್ರವಾರ ಬೆಳಗಿನ ತಿಂಡಿಗೆ ದೋಸೆ, ಚಟ್ನಿ ನೀಡಲಾಗಿದೆ. ಇದನ್ನು ಸೇವನೆ ಮಾಡಿ ತರಗತಿಗೆ ತೆರಳಿದ್ದ 18 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.
ಶಾಲೆ ಪ್ರಾರಂಭವಾಗುವ ಮುನ್ನ ಮೈದಾನದಲ್ಲಿ ಆಟವಾಡುತ್ತಿದ್ದ ಕೆಲ ವಿದ್ಯಾರ್ಥಿಗಳಲ್ಲಿ ಇದ್ದಕ್ಕಿಂದ್ದಂತೆ ವಾಂತಿ ಆಗಿದೆ. ಆ ಪೈಕಿ 5 ಮಂದಿಗೆ ವಾಂತಿ&ಭೇದಿ ಜತೆಗೆ ಜ್ವರವೂ ಕಾಣಿಸಿಕೊಂಡಿದ್ದು, ತೀವ್ರ ಅಸ್ವಸ್ಥಗೊಂಡಿದ್ದಾರೆ.
ವಿಷಯ ತಿಳಿದ ಶಾಲೆಯ ಶಿಕ್ಷಕರು ಹಾಗೂ ಅಡುಗೆ ಸಹಾಯಕ ಮಕ್ಕಳನ್ನು ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ತೀವ್ರವಾಗಿ ಅಸ್ವಸ್ಥಗೊಂಡಿದ್ದ ವಿಕ್ರಮ್, ಗೌತಮ್, ಮದನ್, ಮದನ್ ಕುಮಾರ್ ಹಾಗೂ ಮೇಘನಾನಂದನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಚಿಂತಾಮಣಿ ಮತ್ತು ಅಮನಲ್ಲೂರು ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್, ವೇಮಗಲ್ ಠಾಣೆಯ ಪೊಲೀಸರು, ಕೋಲಾರ ತಹಸೀಲ್ದಾರ್ ಡಾ.ನಯನಾ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
ಆರೋಗ್ಯದಲ್ಲಿ ಚೇತರಿಕೆ
ವಿದ್ಯಾರ್ಥಿನಿಲಯದಲ್ಲಿ ಒಟ್ಟು 54 ವಿದ್ಯಾರ್ಥಿಗಳಿದ್ದು, ಇಬ್ಬರು ಅಡುಗೆ, ಒಬ್ಬರು ಅಡುಗೆ ಸಹಾಯಕ ಹಾಗೂ ಕಾವಲುಗಾರ ಇದ್ದಾರೆ. ಅಡುಗೆ ಸಹಾಯಕ ಮಕ್ಕಳೊಂದಿಗೆ ಸೌಜನ್ಯದಿಂದ ವರ್ತಿಸುವುದಿಲ್ಲ ಎಂಬ ದೂರುಗಳು ಬಂದಿದ್ದು, ಶಿಸ್ತುಕ್ರಮಕ್ಕೆ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಅಸ್ವಸ್ಥಗೊಂಡಿದ್ದ ಮಕ್ಕಳೆಲ್ಲ ಈಗ ಚೇತರಿಸಿಕೊಳ್ಳುತ್ತಿದ್ದು, ಯಾವುದೇ ರೀತಿ ತೊಂದರೆಯಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ.
ರಾತ್ರಿ ಮಿಕ್ಕಿದ್ದ ಅನ್ನದಿಂದ ದೋಸೆ
ಚಿಕಿತ್ಸೆ ಪಡೆಯತ್ತಿರುವ ವಿದ್ಯಾರ್ಥಿ ಮೇನಂದನ ಮಾತನಾಡಿ, ಗುರುವಾರ ರಾತ್ರಿ ಮಿಕ್ಕಿದ್ದ ಅನ್ನದಿಂದಲೇ ಶುಕ್ರವಾರ ಬೆಳಗ್ಗೆ ದೋಸೆ ಮಾಡಿದ್ದರು. ಅದನ್ನು ತಿಂದ ನಂತರ 18 ವಿದ್ಯಾರ್ಥಿಗಳಿಗೆ ವಾಂತಿಯಾಯಿತು. ತಕ್ಷಣ ಕೆಲವರನ್ನು ಸ್ಥಳಿಯ ಆಸ್ಪತ್ರೆಗೆ, ನಮ್ಮನ್ನು ಚಿಂತಾಮಣಿಗೆ ಕರೆ ತಂದರು ಎಂದು ತಿಳಿಸಿದ್ದಾನೆ.