

Kaylan McDonald : ಡಿಜಿಟಲ್ ಯುಗದಲ್ಲಿ ಹಣ ಸಂಪಾದಿಸಲು ಹಲವಾರು ಮಾರ್ಗಗಳಿವೆ. ಇಂದಿನ ಯುವ ಪೀಳಿಗೆಯು ಡಿಜಿಟಲ್ ಮಾರ್ಕೆಟಿಂಗ್ ಮತ್ತು ಕಂಟೆಂಟ್ ಕ್ರಿಯೆಟ್ ಮೂಲಕ ಹೆಚ್ಚಿನ ಹಣವನ್ನು ಗಳಿಸುತ್ತಿದೆ. ಹೆಚ್ಚಿನವರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಕೆಲಸಗಳನ್ನು ಮಾಡಿಯು ಹಣ ಸಂಪಾದಿಸುತ್ತಾರೆ. ಇದೇ ರೀತಿ ಹಣ ಸಂಪಾದಿಸುತ್ತಿರುವ 17 ವರ್ಷದ ಯುವಕ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾನೆ. ಆ ಹುಡುಗನೇ ಕೈಲಾನ್ ಮ್ಯಾಕ್ಡೊನಾಲ್ಡ್.
ಕೈಲಾನ್ ಮ್ಯಾಕ್ಡೊನಾಲ್ಡ್ ಬ್ರಿಟನ್ ಮೂಲದವನು. ಈತ ಆನ್ಲೈನ್ನಲ್ಲಿ ಸ್ಟಿಕ್ಕರ್ಗಳನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 19,000 ಡಾಲರ್ (ಸುಮಾರು 16 ಲಕ್ಷ ರೂ.) ಗಳಿಸುತ್ತಿದ್ದಾನೆ. ಕ್ರಿಸ್ಮಸ್ ಉಡುಗೊರೆಯಾಗಿ ತನ್ನ ತಾಯಿ ನೀಡಿದ ಕ್ರಾಫ್ಟ್ ಕಿಟ್ ಅನ್ನು ಬಳಸಿಕೊಂಡು ಕೈಲಾನ್, ತನ್ನ ಸ್ಟಿಕ್ಕರ್ ವ್ಯವಹಾರವನ್ನು ಪ್ರಾರಂಭಿಸಿದನು.
ಕೈಲಾನ್ ಅವರ ತಾಯಿ ಕರೆನ್ ನ್ಯೂಶ್ಯಾಮ್ ಅವರು ಎರಡು ವರ್ಷಗಳ ಹಿಂದೆ 190.37 ಡಾಲರ್ (ಸುಮಾರು ರೂ. 16,000) ಮೌಲ್ಯದ ಡಿಜಿಟಲ್ ಡ್ರಾಯಿಂಗ್ ಮತ್ತು ಪ್ರಿಂಟಿಂಗ್ ಯಂತ್ರವಾದ ಕ್ರಿಕಟ್ ಜಾಯ್ ಅನ್ನು ಉಡುಗೊರೆಯಾಗಿ ನೀಡಿದರು. ಇದನ್ನು ಬಳಸಿಕೊಂಡು ಕೈಲಾನ್ ವಿವಿಧ ರೀತಿಯ ಸ್ಟಿಕ್ಕರ್ಗಳನ್ನು ತಯಾರಿಸಲು ಪ್ರಾರಂಭಿಸಿದರು.
ತಾನು ತಯಾರಿಸಿದ ಸ್ಟಿಕ್ಕರ್ಗಳನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದನು. ಬಳಿಕ ಸ್ಟಿಕ್ಕರ್ಗಳಿಗೆ ಬೇಡಿಕೆ ಹೆಚ್ಚಾಯಿತು. ಇದರಿಂದ ಹಣ ಸಂಪಾದಿಸಲು ಆರಂಭಿಸಿದನು. 2024ರ ಆರಂಭದ ವೇಳೆಗೆ, ಕೈಲಾನ್ ಸುಮಾರು 200 ಆರ್ಡರ್ಗಳನ್ನು ಪಡೆದನು. ಶಾಲೆಯನ್ನು ಮುಗಿಸಿ ಬಂದು ಪ್ರತಿದಿನ ಮೂರು ಗಂಟೆಗಳ ಕಾಲ ಸ್ಟಿಕ್ಕರ್ಗಳನ್ನು ತಯಾರಿಸುತ್ತಿದ್ದನು.
ಅಲ್ಲದೆ, ವಿದ್ಯಾಭ್ಯಾಸ ಮುಗಿಸಿ ದೊಡ್ಡ ದೊಡ್ಡ ಪ್ರಿಂಟರ್ಗಳನ್ನು ಖರೀದಿಸಿ ವ್ಯಾಪಾರದಲ್ಲಿ ಸುಧಾರಣೆ ತರತೊಡಗಿದನು. ಇದೀಗ ಟಿಕ್ಟಾಕ್ ಶಾಪ್ ಮತ್ತು ಇತರ ವೆಬ್ಸೈಟ್ಗಳ ಮೂಲಕ ಸ್ಟಿಕ್ಕರ್ಗಳನ್ನು ಮಾರಾಟ ಮಾಡುವ ಮೂಲಕ, ಮೇ ತಿಂಗಳಲ್ಲಿ ಕೈಲಾನ್, 94,410.31 ಡಾಲರ್ ( 79,98,563 ರೂಪಾಯಿ ) ಗಳಿಸಿದ್ದಾನೆ. (ಏಜೆನ್ಸೀಸ್)