ಭೀಕರ ದೋಣಿ ದುರಂತ: 17 ಜನರ ಸಾವು, ಹಲವರು ನಾಪತ್ತೆ..

boat sink
ಸಾಂದರ್ಭಿಕ ಚಿತ್ರ
Published on

ಮ್ಯಾನ್ಮಾರ್‌: ರೋಹಿಂಗ್ಯಾ ನಿರಾಶ್ರಿತರನ್ನು ಸಾಗಿಸುತ್ತಿದ್ದ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ 17 ಜನರು ಮೃತಪಟ್ಟು, ಹಲವರು ನಾಪತ್ತೆಯಾಗಿರುವ ದೋಣಿ ದುರಂತ ಮ್ಯಾನ್ಮಾರ್​​ನಲ್ಲಿ ನಡೆದಿದೆ.

ಇದನ್ನೂ ಓದಿ: ಬಾಯ್ ಫ್ರೆಂಡ್ ಜೊತೆ ಮದುವೆಯಾಗಲು ತಂದೆ ಅಡ್ಡಿ: ಮಗಳ ಪ್ಲ್ಯಾನ್​​ ಪೊಲೀಸರನ್ನೂ ಬೆಚ್ಚಿ ಬೀಳಿಸಿತ್ತು..!

ಮೃತಪಟ್ಟವರ ಗುರುತನ್ನು ಪತ್ತೆ ಹಚ್ಚುವ ಕಾರ್ಯ ಚಾಲ್ತಿಯಲ್ಲಿದ್ದು, ರಕ್ಷಣಾದಳದ ಸಿಬ್ಬಂದಿ ನಾಪತ್ತೆಯಾದವರಿಗಾಗಿ ಶೋಧ ನಡೆಸುತ್ತಿದ್ದಾರೆ. ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ 50ಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ಮಲೇಷ್ಯಾಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು, ಮೃತರು ಮ್ಯಾನ್ಮಾರ್‌ನ ವಿವಿಧ ಪಟ್ಟಣಗಳಿಗೆ ಸೇರಿದವರು ಎಂದು ವರದಿಯಾಗಿದೆ.

ಘಟನೆ ಕುರಿತು ಸಿಟ್ವೆ ಪಟ್ಟಣದ ಶ್ವೆ ಯೌಂಗ್ ಮೆಟ್ಟಾ ಫೌಂಡೇಶನ್‌ನ ರಕ್ಷಣಾದಳದ ಸಿಬ್ಬಂದಿ ಬೈರ್ ಲಾ ಮಾತನಾಡಿದ್ದು, ದೋಣಿಯು ಒಟ್ಟು 50ಕ್ಕೂ ಹೆಚ್ಚು ಜನರನ್ನು ಸಾಗಿಸುತ್ತಿತ್ತು, ತಾವು ನಿನ್ನೆಯಿಂದ ಸುಮಾರು 17 ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದು, ಎಂಟು ಜನರನ್ನು ರಕ್ಷಿಸಿದ್ದೇವೆ. ಇವರನ್ನು ಪೊಲೀಸರು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ನಾಪತ್ತೆಯಾದವರಿಗಾಗಿ ತಮ್ಮ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ. ದೋಣಿಯು ಸಮುದ್ರದಲ್ಲಿನ ಚಂಡಮಾರುತ ಮತ್ತು ಬೃಹತ್ ಅಲೆಗಳಿಂದಾಗಿ ಮುಳುಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮ್ಯೂಸಿಕ್​ ಕಂಪನಿಗೆ ನುಗ್ಗಿ ಉದ್ಯಮಿಯ ಅಪಹರಣ: ಶಾಸಕನ ಪುತ್ರ ಸೇರಿ ಹಲವರ ವಿರುದ್ಧ ಎಫ್​ಐಆರ್​

ರೋಹಿಂಗ್ಯಾಗಳನ್ನು ವಿಶ್ವದ ಅತ್ಯಂತ ಕಿರುಕುಳಕ್ಕೊಳಗಾದ ಸಮುದಾಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಬಂಡುಕೋರ ಗುಂಪಿನ ದಾಳಿಗೆ ಪ್ರತಿಕ್ರಿಯೆಯಾಗಿ ಮ್ಯಾನ್ಮಾರ್ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ 2017ರ ಆಗಸ್ಟ್​​ನಿಂದ ಲಕ್ಷಾಂತರ ರೋಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಿಗೆ ಪಲಾಯನ ಮಾಡಿದ್ದಾರೆ.

ಮ್ಯಾನ್ಮಾರ್ ಭದ್ರತಾ ಪಡೆಗಳ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆಗಳು ಮತ್ತು ಸಾವಿರಾರು ರೋಹಿಂಗ್ಯಾ ಮನೆಗಳನ್ನು ಸುಟ್ಟ ಆರೋಪವಿದ್ದು, ಬಾಂಗ್ಲಾದೇಶದ ಕಿಕ್ಕಿರಿದ ನಿರಾಶ್ರಿತರ ಶಿಬಿರಗಳಲ್ಲಿ ಅವರಿಗೆ ಪರಿಸ್ಥಿತಿ ಹೆಚ್ಚು ಅನುಕೂಲಕರವಾಗಿಲ್ಲ. ಪರಿಣಾಮವಾಗಿ, ರೋಹಿಂಗ್ಯಾಗಳು ಮುಸ್ಲಿಂ ಬಹುಸಂಖ್ಯಾತ ದೇಶಗಳಿಗೆ ವಲಸೆ ಹೋಗಿ ಉತ್ತಮ ಜೀವನವನ್ನು ಕಂಡು ಕೊಳ್ಳಲು ಅಪಾಯಕಾರಿ ಪ್ರಯಾಣಗಳನ್ನು ನಿರಂತರವಾಗಿ ಕೈಗೊಳ್ಳುವುದಕ್ಕೆ ಹೆಸರುವಾಸಿಯಾಗಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net