

ಕಾಬೂಲ್: ಅಫ್ಘಾನಿಸ್ತಾನ್ ರಾಜಧಾನಿ ಕಾಬೂಲ್ನ ಸರ್ಕಾರಿ ಹೆರಿಗೆ ಆಸ್ಪತ್ರೆಯೊಂದಕ್ಕೆ ಮಂಗಳವಾರ (ಮೇ 5) ಪೊಲೀಸ್ ವೇಷ ಧರಿಸಿ ನುಗ್ಗಿದ ಭಯೋತ್ಪಾದಕರು ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಎರಡು ನವಜಾತ ಶಿಶುಗಳು ಸೇರಿ 16 ಜನ ಸಾವಿಗೀಡಾಗಿದ್ದಾರೆ.
ನಂಗಹಾರ್ನ ಪೂರ್ವ ಪ್ರಾಂತ್ಯದಲ್ಲಿ ಅದೇ ದಿನ ಪೊಲೀಸ್ ಕಮಾಂಡರ್ ಒಬ್ಬರ ಅಂತ್ಯಕ್ರಿಯೆ ವೇಳೆ ನಡೆದ ಮತ್ತೊಂದು ಅತ್ಮಾಹುತಿ ಬಾಂಬ್ ದಾಳಿಯಲ್ಲಿ ಅಂದಾಜು 24 ಜನ ಸಾವನ್ನಪ್ಪಿದ್ದು, 68 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಂಸತ್ ಸದಸ್ಯರೊಬ್ಬರು ಹಾಜರಾಗಿದ್ದರು.
ಪೊಲಿಸ್ ಸಮವಸ್ತ್ರ ಧರಿಸಿದ ಮೂವರು ಬಂದೂಕುಧಾರಿಗಳು ಬೆಳಗ್ಗೆ ದಶ್ತ್ -ಎ ಬಾರ್ಚಿ ಆಸ್ಪತ್ರೆಗೆ ನುಗ್ಗಿ ಗ್ರೆನೇಡ್ ಹಾಗೂ ಗುಂಡಿನ ದಾಳಿ ನಡೆಸಿದರು ಎಂದು ಸರ್ಕಾರಿ ಅಧಿಕಾರಿಗಳು ತಿಳಸಿದ್ದಾರೆ. ದಾಳಿಕೋರರನ್ನು ಭದ್ರತಾ ಪಡೆಗಳು ಕೊಂದುಹಾಕಿವೆ.
100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ಮೆಡಿಸಿನ್ಸ್ ಸ್ಯಾನ್ಸ್ ಫ್ರಾಂಟೀಯರ್ಸ್ (ಎಂಎಸ್ಎಫ್- ಗಡಿಗಳಿಲ್ಲದ ಆಸ್ಪತ್ರೆ) ಎಂದೇ ಪ್ರಸಿದ್ಧವಾಗಿದೆ. ಆಸ್ಪತ್ರೆಯಲ್ಲಿ ಗುಂಡಿನ ದಾಳಿ ನಡೆದಿರುವುದಾಗಿ ಎಂಎಸ್ಎಫ್ ಟ್ವೀಟ್ ನಲ್ಲಿ ದೃಢಪಡಿಸಿದೆ.
ಸಾವಿಗೀಡಾದವರಲ್ಲಿ ಹಾಗೂ ಗಾಯಗೊಂಡವರಲ್ಲಿ ತಾಯಂದಿರು, ನರ್ಸ್ಗಳು, ಮಕ್ಕಳು ಸೇರಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. (ಏಜನ್ಸೀಸ್)