

ಬೆಂಗಳೂರು: ಕಳೆದ ವರ್ಷ ಖಾಸಗಿ ಶಾಲೆಗಳ ಶುಲ್ಕವನ್ನು ಶೇ.30 ಇಳಿಸಿದ್ದ ಶಿಕ್ಷಣ ಇಲಾಖೆ ಈ ವರ್ಷ ಶೇ.15 ಕಡಿತ ಮಾಡಿದೆ. ಹೈಕೋರ್ಟ್ ಸೂಚನೆ ಮೇರೆಗೆ ಕಡಿತಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈಗಾಗಲೇ ಪೂರ್ಣ ಶುಲ್ಕ ಪಾವತಿಸಿದ್ದಲ್ಲಿ ಹೆಚ್ಚುವರಿ ಶುಲ್ಕವನ್ನು ಪಾಲಕರಿಗೆ ಹಿಂದಿರುಗಿಸುವುದು ಅಥವಾ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ. ಶಾಲಾ ಅಭಿವೃದ್ಧಿ ಶುಲ್ಕ, ಐಚ್ಛಿಕ ಶುಲ್ಕ ಸೇರಿದಂತೆ ಇತರ ಯಾವುದೇ ಶುಲ್ಕ ಸ್ವೀಕರಿಸದಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಸೂಚಿಸಲಾಗಿದೆ. 2020-21ನೇ ಶೈಕ್ಷಣಿಕ ವರ್ಷದಲ್ಲಿ ನಿಗದಿ ಪಡಿಸಲಾಗಿರುವ ಶುಲ್ಕಕ್ಕಿಂತ ಕಡಿಮೆ ಮಾಡಲು ಆಡಳಿತ ಮಂಡಳಿಗೆ ಸ್ವಾತಂತ್ರ್ಯ ನೀಡಲಾಗಿದೆ.
ಶಾಲೆ ಆರಂಭದಿಂದಲೇ ಪಾಲಕರು ಶುಲ್ಕ ಕಡಿಮೆ ಮಾಡು ವಂತೆ ಒತ್ತಾಯಿಸುತ್ತಿದ್ದರು. ಆದರೆ, ಶಿಕ್ಷಣ ಇಲಾಖೆ ಶಾಲೆ ಪ್ರವೇಶ ಪ್ರಕ್ರಿಯೆ ಆರಂಭವಾಗಿ ಮೂರ್ನಾಲ್ಕು ತಿಂಗಳ ನಂತರ ಶುಲ್ಕ ಕಡಿತ ಮಾಡಿದೆ. ಶೇ.80 ಪಾಲಕರು ಈಗಾಗಲೇ ಶುಲ್ಕ ಪಾವತಿಸಿದ್ದು, ವಿಳಂಬವಾಗಿ ಆದೇಶ ಹೊರಡಿಸಿರುವುದಕ್ಕೆ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ಆಗಿತ್ತು.
ಶಿಕ್ಷಣ ಇಲಾಖೆ ಶೇ.70 ಬೋಧನಾ ಶುಲ್ಕ ಪಾವತಿಸುವಂತೆ ಆದೇಶಿಸಿತ್ತು. ಈಗಾಗಲೆ, ಪಾವತಿಸಿದ್ದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಡಿತ ಮಾಡುವಂತೆ ಸೂಚಿಸಿತ್ತು. ಆದರೆ, ಬಹುತೇಕ ಖಾಸಗಿ ಶಾಲೆಗಳು ಇಂದಿಗೂ ಪಾಲಕರಿಗೆ ಶುಲ್ಕ ಮರುಪಾವತಿ ಅಥವಾ ಈ ವರ್ಷದ ಶುಲ್ಕದಲ್ಲಿ ಸರಿದೂಗಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಖಾಸಗಿ ಶಾಲೆಗಳ ಆಕ್ರೋಶ: ಹೈಕೋರ್ಟ್ ಆದೇಶದಲ್ಲಿ ವಾರ್ಷಿಕ ಶುಲ್ಕ ಎಂದಿದೆ. ಕನ್ನಡದ ಅನುವಾದ ಮಾಡುವಾಗ ಬೋಧನಾ ಶುಲ್ಕವೆಂದು ತಪು್ಪ ಮಾಡಲಾಗಿದೆ. ಶಿಕ್ಷಣ ಸಚಿವರು ಈ ರೀತಿ ಆದೇಶ ಮಾಡುವಂತೆ ಸೂಚನೆ ನೀಡಿ ಪಾಲಕರಲ್ಲಿ ಅನವಶ್ಯಕವಾಗಿ ಗೊಂದಲ ಉಂಟು ಮಾಡಿದ್ದಾರೆಂದು ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್್ಸ ಆರೋಪಿಸಿದೆ. ಹೆಚ್ಚುವರಿ ಶುಲ್ಕ ಪಡೆಯದಂತೆ ಸೂಚನೆ ನೀಡಿರುವುದು ಸರಿಯಲ್ಲ. ಹೈಕೋರ್ಟ್ ಸೂಚನೆಯಲ್ಲಿ ವಾರ್ಷಿಕ ಶುಲ್ಕದಲ್ಲಿ ಶೇ.15 ಕಡಿತ ಎಂದಿದೆ. ಇಲ್ಲಿ ಬೋಧನಾ ಶುಲ್ಕ ಎಂದಾಗಿದೆ. ಶಿಕ್ಷಣ ಸಚಿವರು ದುಬೈನಲ್ಲಿರುವುದರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದು ನ್ಯಾಯಾಂಗ ನಿಂದನೆಯಾಗಲಿದ್ದು, ಹೈಕೋರ್ಟ್ನಲ್ಲಿ ಪ್ರಕರಣ ದಾಖಲು ಮಾಡುತ್ತೇವೆಂದು ಕ್ಯಾಮ್್ಸ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಹೇಳಿದ್ದಾರೆ.