

ನವದೆಹಲಿ : ಭಾರತದಲ್ಲಿ ಕನಿಷ್ಠ 15 ಕೋಟಿ ಮಕ್ಕಳು ಮತ್ತು ಯುವಜನರು ಔಪಚಾರಿಕ ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ. ಹಾಗೂ ಸರಿಸುಮಾರು 25 ಕೋಟಿ ಜನಸಂಖ್ಯೆಯು ಸಾಕ್ಷರತೆಯ ಪ್ರಾಥಮಿಕ ವ್ಯಾಖ್ಯಾನಕ್ಕಿಂತ ಕೆಳಗಿದೆ ಎಂದು ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಇಂದು (ಆಗಸ್ಟ್ 12) ಭಾರತೀಯ ಕೈಗಾರಿಕಾ ಒಕ್ಕೂಟ(ಸಿಐಐ)ದ ವಾರ್ಷಿಕ ಸಭೆಯಲ್ಲಿ ಆಯೋಜಿಸಲಾಗಿದ್ದ 'ಉದ್ಯೋಗ ಸೃಷ್ಟಿ ಮತ್ತು ಉದ್ಯಮಶೀಲತೆ' ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದ ತಕ್ಷಣ ನಡೆಸಿದ್ದ ಸೆನ್ಸಸ್ನ ಪ್ರಕಾರ ಶೇ.19 ರಷ್ಟು ಜನಸಂಖ್ಯೆ ಸಾಕ್ಷರವಾಗಿತ್ತು. 75 ವರ್ಷಗಳ ಸ್ವಾತಂತ್ರ್ಯಾನಂತರ ಸಾಕ್ಷರರ ಸಂಖ್ಯೆಯು ಶೇ. 80 ರಷ್ಟಿದೆ. ಅಂದರೆ ಸುಮಾರು 25 ಕೋಟಿ ಜನರು ಸಾಕ್ಷರತೆಯ ಮಟ್ಟದ ಹೊರಗಿದ್ದಾರೆ ಎಂದು ಪ್ರಧಾನ್ ತಿಳಿಸಿದರು.
ಸರ್ಕಾರಿ, ಖಾಸಗಿ ಮತ್ತು ದತ್ತಿ ಶಾಲೆಗಳು, ಅಂಗನವಾಡಿಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೌಶಲ್ಯ ತರಬೇತಿ ಸಂಸ್ಥೆಗಳಲ್ಲಿ ದಾಖಲಾಗಿರುವ 3-22 ವರ್ಷದೊಳಗಿನ ಮಕ್ಕಳು ಮತ್ತು ಯುವಜನರ ಸಂಖ್ಯೆಯು ಸುಮಾರು 35 ಕೋಟಿಯಷ್ಟಿದೆ. ಈ ವಯಸ್ಸಿನ ಗುಂಪಿನಲ್ಲಿ ದೇಶದ ಒಟ್ಟು ಜನಸಂಖ್ಯೆಯು ಸುಮಾರು 50 ಕೋಟಿಗಳಷ್ಟಿದೆ. ಹೀಗಾಗಿ, ಕನಿಷ್ಠ 15 ಕೋಟಿ ಮಕ್ಕಳು, ಯುವಜನರು ಔಪಚಾರಿಕ ಶಿಕ್ಷಣದಿಂದ ಹೊರಗುಳಿದಿದ್ದಾರೆ ಎಂಬುದು ತಿಳಿದುಬಂದಿದೆ ಎಂದು ಪ್ರಧಾನ್ ಹೇಳಿದರು.
"ಶಿಕ್ಷಣ ವ್ಯವಸ್ಥೆಯ ಹೊರಗುಳಿದಿರುವವರನ್ನು ಅದರ ವ್ಯಾಪ್ತಿಗೆ ತರುವುದು ನಮ್ಮ ಉದ್ದೇಶವಾಗಿದೆ" ಎಂದ ಪ್ರಧಾನ್, "ರಾಷ್ಟ್ರೀಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ಮುಂದಿನ 25 ವರ್ಷಗಳಲ್ಲಿ, ಅಂದರೆ 100 ವರ್ಷಗಳ ಸ್ವಾತಂತ್ರ್ಯದ ವೇಳೆಗೆ ನಾವು ಸಾಧಿಸಬೇಕಾದ ಗುರಿಗಳ ಮಾರ್ಗಸೂಚಿಯಾಗಿದೆ" ಎಂದರು. (ಏಜೆನ್ಸೀಸ್)