ತಾಯಿ ಸತ್ತಿರುವ ವಿಚಾರ ತಿಳಿಯದೆ ಶವದೊಂದಿಗೆ ನಾಲ್ಕು ದಿನ ಕಳೆದ ಮಗ

Death
Published on

ಮುಂಬೈ: ಮನಕಲುಕುವ ಘಟನೆಯೊಂದರಲ್ಲಿ ತಾಯಿ ಮೃತಪಟ್ಟಿರುವ ವಿಷಯ ತಿಳಿಯದೆ ಆಕೆಯ ಶವದೊಂದಿಗೆ ಬುದ್ದಿಮಾಂದ್ಯ ಮಗನೋರ್ವ ನಾಲ್ಕು ದಿನ ಕಳೆದಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಕಲ್ಯಾಣ್​ ಪ್ರದೇಶದಲ್ಲಿ ನಡೆದಿದೆ. ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ನೆರೆಹೊರೆಯವರು ಪರಿಶೀಲಿಸಿದಾಗ ವಿಚಾರ ಬೆಳಕಿಗೆ ಬಂದಿದೆ.

ಮೃತರನ್ನು ಸಿಲ್ವಿಯಾ ಡೇನಿಯಲ್ (44) ಎಂದು ಗುರುತಿಸಲಾಗಿದ್ದು, ಥಾಣೆಯ ಕಲ್ಯಾಣ್​ ಪ್ರದೇಶದ ಫ್ಲ್ಯಾಟ್​​ ಒಂದರಲ್ಲಿ ತಮ್ಮ ಬುದ್ದಿಮಾಂದ್ಯ ಮಗನೊಂದಿಗೆ ವಾಸಿಸುತ್ತಿದ್ದರು. ಪತಿ ಉದ್ಯೋಗ ನಿಮಿತ್ತ ಪುಣೆಯಲ್ಲಿ ನೆಲೆಸಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿಯೊಬ್ಬರು, ಕೆಲವು ತಿಂಗಳಿನಿಂದ ಸಿಲ್ವಿಯಾ ಡೇನಿಯಲ್​ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಜುಲೈ 28ರಂದು ಅವರು ನಿಧನರಾಗಿದ್ದು, ತನ್ನ ತಾಯಿ ಮರತಪಟ್ಟ ವಿಚಾರ ತಿಳಿಯದೆ ಅವರ ಮಗ ನಾಲ್ಕು ದಿನಗಳ ಕಾಲ ಶವದೊಂದಿಗೆ ಕಾಲ ಕಳೆದಿದ್ದಾನೆ. ದಿನ ಕಳೆದಂತೆ ಮನೆಯಿಂದ ದುರ್ವಾಸನೆ ಬರಲು ಆರಂಭಿಸಿದ್ದು, ಬಾಗಿಲು ಬಡಿದಾಗ ಅವರ ಮಗ ಡೋರ್​ ತೆರೆದಿದ್ದಾನೆ. ಆಗ ಮಹಿಳೆ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಮಹಿಳೆಯ ಪತಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಮನೆಯಲ್ಲಿ ಕೆಲಕಾಲ ಪರಿಶೀಲನೆ ನಡೆಸಿದರು ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net