

ವಯನಾಡು: ಜುಲೈ 30ರಂದು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 320ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ. ಮಣ್ಣಿನಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ.
ಘಟನೆ ಸಂಬಂಧ ವಯನಾಡಿಗೆ ಭೇಟಿ ನೀಡಿದ ನಿಕಟಪೂರ್ವ ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಸ್ಥಳ ಪರಿಶೀಲನೆ ನಡೆಸಿ ಕಾಂಗ್ರೆಸ್ ವತಿಯಿಂದ 100 ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಘೋಷಿಸಿದ್ದಾರೆ. ಅಲ್ಲದೇ ಘಟನೆಯನ್ನು ರಾಷ್ಟ್ರೀಯ ವಿಪತ್ತು ಎಂದು ಕರೆದಿದ್ದಾರೆ.
ಕೇರಳದಲ್ಲಿ ಈ ಹಿಂದೆ ಒಂದೇ ಒಂದು ಪ್ರದೇಶದಲ್ಲಿ ಇಂತಹ ದುರ್ಘಟನೆ ನಡೆದಿಲ್ಲ. ಸಂಸತ್ನಲ್ಲೂ ಈ ಬಗ್ಗರ ಪ್ರಸ್ತಾಪಿಸಿ ಸರ್ಕಾರದ ಗಮನವನ್ನು ಸೆಳೆಯುತ್ತೇವೆ. ತುರ್ತು ಸಮಗ್ರ ಕ್ರಿಯಾ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು. ಸಾಧ್ಯವಾದ ರೀತಿಯಲ್ಲಿ ಸಹಾಯ ಮಾಡಲು ನಾವು ಇಲ್ಲಿದ್ದೇವೆ. ಕಾಂಗ್ರೆಸ್ ವತಿಯಿಂದ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗುವುದು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಜುಲೈ 30ರಂದು ಮುಂಡಕ್ಕೈ, ಚೂರಲ್‌ಮಲ ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ 300ರ ಗಡಿ ದಾಟಿದೆ. ಇನ್ನೂ 350ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಭಾರಿ ಯಂತ್ರಗಳ ಮೂಲಕ ಕಲ್ಲುಬಂಡೆಗಳನ್ನು ತೆರುವುಗೊಳಿಸಿ, ಅವಶೇಷಗಳಡಿ ಸಿಲುಕಿರುವವರನ್ನು ಹೊರಕ್ಕೆ ತರಲು ರಕ್ಷಣಾ ತಂಡಗಳು ಎಡಬಿಡದೆ ಕಾರ್ಯಾಚರಣೆ ನಡೆಸುತ್ತಿದೆ.