

ಶಿಕಾರಿಪುರ: ತಾಲೂಕಿನ ಬಗನಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ವಿಶೇಷ ತರಗತಿಗೆ ಹಾಜರಾಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮೇಲೆ ಜೇನು ಹುಳುಗಳು ದಾಳಿ ಮಾಡಿದ್ದು, 14 ಮಕ್ಕಳು ಅಸ್ವಸ್ಥರಾಗಿದ್ದಾರೆ.
ಹೆಚ್ಚು ಕಡಿತಕ್ಕೊಳಗಾಗಿದ್ದ ಬಿಂದು, ಸಂಜನಾ, ತಾರಾ, ರಾಹುಲ್, ಗಗನಾ, ನಾಗಮ್ಮ ಎಂಬುವರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಧನುಷ್, ಕಾರ್ತಿಕ್, ಹರ್ಷ, ಚಂದು, ಚಿರಂಜೀವಿ , ಟಿ.ಎಂ.ಚಂದು, ಸಂಜನಾ, ಸಪ್ನಾ ಶಿಕಾರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಲಾ ಕಟ್ಟಡದ ಮೊದಲ ಅಂತಸ್ತಿನಲ್ಲಿ ಬಹಳಷ್ಟು ದಿನಗಳಿಂದ ಜೇನು ದೊಡ್ಡ ಪ್ರಮಾಣದಲ್ಲಿ ಗೂಡು ಕಟ್ಟಿತ್ತು. ಆದರೆ ಈವರೆಗೆ ತೊಂದರೆ ಮಾಡಿರಲಿಲ್ಲ. ಶುಕ್ರವಾರ ಬೆಳಗ್ಗೆ ತರಗತಿಗೆ ಬಂದಿದ್ದ ವಿದ್ಯಾರ್ಥಿಗಳ ಪೈಕಿ ಯಾರೋ ಗೂಡನ್ನು ಕೆಣಕಿದ್ದಾರೆ. ಆಗ ದಾಳಿ ನಡೆಸಿವೆ. ಡಿ ಗ್ರೂಪ್ ನೌಕರನಿಗೂ ಹುಳುಗಳು ಕಚ್ಚಿವೆ. ವಿದ್ಯಾರ್ಥಿಗಳು ಚೀರುತ್ತ ಊರಿನತ್ತ ಓಡಿ ಬಂದಾಗ ಶಿಕ್ಷಕರು, ಪಾಲಕರು ಕೂಡಲೇ ಶಿಕಾರಿಪುರ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದಾರೆ. ತೀವ್ರ ಅಸ್ವಸ್ಥರಾದವರನ್ನು ಮೆಗ್ಗಾನ್‌ಗೆ ಕರೆದೊಯ್ಯಲಾಯಿತು.
ಪರೀಕ್ಷೆಗೆ ಪೂರಕವಾಗಿ ಶಿಕ್ಷಕರು ವಿಶೇಷ ತರಗತಿ ಆಯೋಜಿಸಿದ್ದರು. ತರಗತಿಗೆ ಬಂದಾಗ ಈ ಅವಘಡ ನಡೆದಿದೆ. ಮಕ್ಕಳು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಇಒ ಲೋಕೇಶ್ವರಪ್ಪ ಮಾಹಿತಿ ನೀಡಿದರು.