

ಗೌಹಾಟಿ: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ಈ ಸಮಯದಲ್ಲಿ ಎಲ್ಲೆಲ್ಲೂ ಆ ಬಗ್ಗೆಯೇ ಸುದ್ದಿಗಳು ಹೊರಬೀಳುತ್ತಿವೆ, ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ತಾಲಿಬಾನ್ಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಪೋಸ್ಟ್ ಹಾಕುವಾಗ, ಶೇರ್ ಅಥವಾ ಲೈಕ್ ಮಾಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಹೇಳಿದ್ದಾರೆ.
ತಾಲಿಬಾನ್ ಚಟುವಟಿಕೆಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ಗಳ ವಿಚಾರವಾಗಿ, ಅಸ್ಸಾಂ ಪೊಲೀಸರು ಈವರೆಗೆ 14 ಜನರನ್ನು ಬಂಧಿಸಿದ್ದಾರೆ. ಈ ಬಗ್ಗೆ ತಿಳಿಸಿರುವ ರಾಜ್ಯದ ಸ್ಪೆಷಲ್ ಡಿಜಿಪಿ ಜಿ.ಪಿ.ಸಿಂಗ್ ಅವರು, ಬಂಧಿತರು ದೇಶದ ವಿವಿಧ ಕಾನೂನುಗಳ ಉಲ್ಲಂಘನೆಯಾಗುವ ರೀತಿಯಲ್ಲಿ ಪೋಸ್ಟ್ಗಳನ್ನು ಮಾಡಿದ್ದರು. ಆದ್ದರಿಂದ ಸಾರ್ವಜನಿಕರು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್ ಅಥವಾ ಲೈಕ್ ಮಾಡುವ ಸಂದರ್ಭದಲ್ಲಿ ವಿವೇಚನೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಕಳೆದ ದಿನಗಳಲ್ಲಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ಶಫೀಖುರ್ ರೆಹಮಾನ್ ಬರ್ಖ್ ಅವರು, ತಾಲಿಬಾನ್ಅನ್ನು ಸ್ವಾತಂತ್ರ್ಯ ಹೋರಾಟಗಾರರೆಂಬಂತೆ ಬಿಂಬಿಸಿದ್ದ ಹಿನ್ನೆಲೆಯಲ್ಲಿ, ಪೊಲೀಸರು ‘ದೇಶದ್ರೋಹ’ ಪ್ರಕರಣ ದಾಖಲಿಸಿದ್ದರು. ಫೇಸ್ಬುಕ್ನಲ್ಲಿ ತಾಲಿಬಾನ್ ಪರ ಹೇಳಿಕೆ ನೀಡಿದ್ದ ಇತರ ಇಬ್ಬರ ವಿರುದ್ಧ ಕೂಡ ಕೇಸು ದಾಖಲಿಸಲಾಗಿತ್ತು. (ಏಜೆನ್ಸೀಸ್)