

ನವದೆಹಲಿ/ಕಾಬುಲ್: ಅಫ್ಘಾನಿಸ್ತಾನದಲ್ಲಿ ಇಂದು ಬೆಳಿಗ್ಗೆ 150 ಜನ ಭಾರತೀಯ ನಾಗರೀಕರನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ, ತಾಲಿಬಾನಿಗಳು ಈ ಭಾರತೀಯರನ್ನು ಪ್ರಶ್ನೆ ಮಾಡುವುದಕ್ಕಾಗಿ ಕರೆದೊಯ್ದಿದ್ದರು ಅಷ್ಟೆ. ಇದೀಗ ಇವರೆಲ್ಲಾ ಭಾರತಕ್ಕೆ ತೆರಳಲು ವಿಮಾನ ನಿಲ್ದಾಣ ತಲುಪಿದ್ದಾರೆ ಎನ್ನಲಾಗಿದೆ.
ಕಾಬುಲ್ನ ವಿಮಾನ ನಿಲ್ದಾಣದ ಹೊರಗೆ ಭಾರತೀಯ ವಿಮಾನಗಳಿಗಾಗಿ ಕಾಯುತ್ತಿದ್ದ ಭಾರತೀಯರನ್ನು ತಾಲಿಬಾನಿಗಳು ಹತ್ತಿರದ ಪೊಲೀಸ್ ಠಾಣೆಗೆ ಒಯ್ದರು. ಅಲ್ಲಿ ಅವರನ್ನು ವಿಚಾರಣೆ ನಡೆಸಿ, ಪ್ರಯಾಣಕ್ಕೆ ಅಗತ್ಯ ದಾಖಲೆಗಳಿವೆಯೇ ಎಂದು ಪರಿಶೀಲಿಸಿ ಕಳುಹಿಸಿದರು ಎಂದು ಸುದ್ದಿಮೂಲಗಳು ತಿಳಿಸಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಈ ಮುನ್ನ, ಇಂದು ಬೆಳಿಗ್ಗೆಯೇ 85 ಭಾರತೀಯರನ್ನೊಳಗೊಂಡ ಭಾರತೀಯ ವಾಯುಪಡೆಯ ವಿಮಾನ ಕಾಬುಲ್ನಿಂದ ಸುರಕ್ಷಿತವಾಗಿ ಹೊರಟ ವರದಿ ಬಂದಿತ್ತು. ತಾಲಿಬಾನ್ ಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ತೆರವುಗೊಳಿಸಲು ಭಾರತ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)