

ಬೆಂಗಳೂರು: ರಾಜ್ಯದಲ್ಲಿ ಗುರುವಾರ 2,228 ಹೊಸ ಪ್ರಕರಣಗಳೊಂದಿಗೆ ಕರೊನಾ ಸೋಂಕಿತರ ಸಂಖ್ಯೆ 31 ಸಾವಿರ ಗಡಿ ದಾಟಿದೆ. 17 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 486ಕ್ಕೆ ಏರಿಕೆಯಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ ಇಂದು ಶೂನ್ಯ ಮರಣ ಪ್ರಮಾಣ ದಾಖಲಾಗಿರುವುದೇ ಸಮಾಧಾನಕರ.
ಬೆಂಗಳೂರು ನಗರದಲ್ಲಿ ಗುರುವಾರ 1,373 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 606 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಆದರೆ, ಯಾವುದೇ ಸಾವು ಸಂಭವಿಸಿಲ್ಲ. ಈಗಲೂ ರಾಜ್ಯದ ಮತ್ತು ಬೆಂಗಳೂರಿನ ಮರಣ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ಶೂನ್ಯ ಮರಣಪ್ರಮಾಣ ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದರು. ಇದನ್ನೂ ಓದಿರಿ ದೇಶದಲ್ಲೇ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಬೆಂಗಳೂರಿನಲ್ಲಿ ಸಿದ್ಧ
ಒಂದು ಲಕ್ಷ ಆಂಟಿಜೆನ್ ಕಿಟ್ ತರಿಸಲಾಗಿದ್ದು, ವಾರಾಂತ್ಯದಲ್ಲಿ ಬೆಂಗಳೂರಿನಲ್ಲೇ 30-40 ಸಾವಿರ ಟೆಸ್ಟ್ ನಡೆಸಲಾಗುವುದು. ಇದರಿಂದ ಸೋಂಕಿತರ ತ್ವರಿತ ಪತ್ತೆಗೆ ಸಹಾಯವಾಗಲಿದೆ ಎಂದು ಡಾ.ಸುಧಾಕರ್ ತಿಳಿಸಿದರು.
ಸೋಂಕಿಗೆ 17 ಮಂದಿ ಬಲಿ: ಗುರುವಾರ ರಾಜ್ಯದಾದ್ಯಂತ 17 ಮಂದಿ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಧಾರವಾಡದಲ್ಲಿ 7, ಕಲಬುರಗಿ, ಹಾಸನ, ಮೈಸೂರಿನಲ್ಲಿ ತಲಾ 2, ರಾಯಚೂರು, ದಾವಣಗೆರೆ, ಉತ್ತರ ಕನ್ನಡ ಮತ್ತು ತುಮಕೂರಿನಲ್ಲಿ ತಲಾ ಒಬ್ಬರಂತೆ 17 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ಇದುವರೆಗೆ ರಾಜ್ಯದಲ್ಲಿ ಕರೊನಾಗೆ ಬಲಿಯಾದವರ ಸಂಖ್ಯೆ 486ಕ್ಕೆ ಏರಿಕೆಯಾಗಿದ್ದು, ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ 457ಕ್ಕೆ ಹೆಚ್ಚಿದ್ದು, ಮತ್ತಷ್ಟು ಸೋಂಕಿತರು ಬಲಿಯಾಗುವ ಆತಂಕ ಎದುರಾಗಿದೆ.