ಹಿಂದು ಬಾಲಕಿಯನ್ನು ಎಳೆದೊಯ್ದು ಮತಾಂತರ ಮಾಡಿ ಮದ್ವೆಯಾದ ಪಾಕ್​ ವ್ಯಕ್ತಿ: ಆದ್ರೆ ಸಂತ್ರಸ್ತೆ ಹೇಳಿದ್ದೇ ಬೇರೆ!

Conversion
Published on

ಇಸ್ಲಮಾಬಾದ್​: ಪಾಕಿಸ್ತಾನದಲ್ಲಿ ಮತ್ತೊಬ್ಬ ಹಿಂದು ಬಾಲಕಿಯನ್ನು ಅಪಹರಣ ಮಾಡಿ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಮದುವೆ ಮಾಡಿರುವ ಘಟನೆ ನಡೆದಿದೆ.

13 ವರ್ಷದ ಹಿಂದು ಬಾಲಕಿಯನ್ನು ಕವಿತಾ ಬಾಯಿ ಎಂದು ಗುರುತಿಸಲಾಗಿದೆ. ಬಹಲ್ಕನಿ ಬುಡಕಟ್ಟಿನ ವ್ಯಕ್ತಿಯೊಬ್ಬ ಕವಿತಾಳನ್ನು ಅಪಹರಿಸಿದ್ದು, ಬರೆಲ್ವಿ ಫಾದ್ರಿ ಮಿಯಾನ್​ ಮಿಥೋ ಬಲವಂತವಾಗಿ ಬಾಲಕಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಅಪಹರಣಕಾರನೊಂದಿಗೆ ಮದುವೆ ಮಾಡಿಸಿದ್ದಾರೆ.

ಮತಾಂತರ ಸಮಾರಂಭದ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಘಟನೆ ಸಿಂಧ್​ ಪ್ರಾಂತ್ಯದ ಕಾಶ್ಮೋರ್​ ಜಿಲ್ಲೆಯ ತಂಗ್ವಾನಿ ತಾಲೂಕಿನಲ್ಲಿ ನಡೆದಿದೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ ಬಾಲಕಿಯನ್ನು ಮಾರ್ಚ್​ 8ರಂದು ಅವರ ಮನೆಯಿಂದಲೇ ಐವರು ವ್ಯಕ್ತಿಗಳು ಅಪಹರಿಸಿದ್ದಾರೆ. ಬಾಲಕಿಯ ತಂದೆಯ ಪ್ರಕಾರ ಐವರು ಸಹ ಶಸ್ತ್ರಸಜ್ಜಿತರಾಗಿದ್ದರು. ಬಾಲಕಿಯನ್ನು ಎಳೆದುಕೊಂಡು ವಾಹನಕ್ಕೆ ಹಾಕಿಕೊಂಡು ಅಲ್ಲಿಂದ ಪರಾರಿಯಾದರು ಎಂದಿದ್ದಾರೆ.

ಆದರೆ, ಬುಧವಾರ ನ್ಯಾಯಾಲಯಕ್ಕೆ ಹಾಜರಾದ ಬಾಲಕಿ ತಾನು 18 ವರ್ಷಕ್ಕಿಂತ ಮೇಲ್ಪಟ್ಟವಳು ಎಂದು ಹೇಳಿಕೊಂಡಿದ್ದಾಳೆ. ಹೆತ್ತವರ ಆಸೆಗೆ ವಿರುದ್ಧವಾಗಿ ಮದುವೆಯಾಗಿರುವುದರಿಂದ ನನ್ನ ಮೇಲೆ ಪಾಲಕರಿಗೆ ಕೋಪ ಇದೆ ಎಂದು ಬಾಲಕಿ ಕೋರ್ಟ್​ ಮುಂದೆ ಹೇಳಿದ್ದಾರೆ. ಸದ್ಯ ಅವಳನ್ನು ಕಾಶ್ಮೋರ್‌ನಿಂದ ಘೋಟ್ಕಿಗೆ ಸ್ಥಳಾಂತರಿಸಲಾಗಿದೆ. ತನಗೆ ರಕ್ಷಣೆ ಬೇಕೆಂದು ಆಕೆಯೇ ನ್ಯಾಯಾಲಯದ ಬಳಿ ಮನವಿ ಮಾಡಿದ್ದಾಳೆ.

ಬಾಲಕಿಯ ಹಕ್ಕಿನ ಹೊರತಾಗಿಯೂ, ಪೊಲೀಸರು ಸಿಂಧ್ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ಕಾಯ್ದೆ ಅಡಿಯಲ್ಲಿ ವಯಸ್ಕ ಮತ್ತು ಅಪ್ರಾಪ್ತ ವಯಸ್ಕನ ನಡುವಿನ ವಿವಾಹಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

ಇದೀಗ ಆಕೆಯ ನೈಜ ವಯಸ್ಸನ್ನು ನಿರ್ಧರಿಸಲು ವೈದ್ಯಕೀಯ ಪರೀಕ್ಷೆಗೆ ನ್ಯಾಯಾಲಯ ಆದೇಶ ನೀಡುವ ಸಾಧ್ಯತೆಯಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net