

ಜೈಪುರ: ಚಿಕ್ಕ ಮಕ್ಕಳು ಕೂಡ ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣ ಮುಂದುವರಿದಿದ್ದು, ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ 12 ವರ್ಷದ ಬಾಲಕನೊಬ್ಬ ಕುಸಿದು ಬಿದ್ದು ಪ್ರಾಣ ಬಿಟ್ಟ ಪ್ರಕರಣ ವರದಿಯಾಗಿದೆ. ರಾಜಸ್ಥಾನದ ಜೈಪುರದಲ್ಲಿ ಈ ದುರಂತ ಸಂಭವಿಸಿದೆ.
ರಾಜಸ್ಥಾನದ ಬಿಕನೇರ್ನ ಖಾಸಗಿ ಶಾಲೆಯ ವಿದ್ಯಾರ್ಥಿ ಇಶಾನ್ ಸಾವಿಗೀಡಾದ ಬಾಲಕ. ವಲ್ಲಭನಗರ ನಿವಾಸಿ ಆಗಿದ್ದ ಈತ ಇಲ್ಲಿನ ಸರ್ದುಲ್ಗಂಜ್ನ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಪಾಠದಲ್ಲಷ್ಟೇ ಅಲ್ಲದೆ ಆಟದಲ್ಲೂ ಈ ಬಾಲಕ ಚುರುಕಾಗಿದ್ದ.
ಈತ ಓಟದ ಸ್ಪರ್ಧೆಯೊಂದರಲ್ಲಿ ಭಾಗಿಯಾಗಿದ್ದು, ಇನ್ನೇನು ಓಟ ಮುಗಿಸಬೇಕು ಎನ್ನುವಷ್ಟರಲ್ಲಿ ಕುಸಿದು ಬಿದ್ದು ಮೂರ್ಛೆ ಹೋಗಿದ್ದ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಹುಡುಗ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕನ ತಂದೆ ಅಶೋಕ್ ಕುಮಾರ್ ಖತ್ರಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದಾರೆ.