ಮುಕೇಶ್ ಅಂಬಾನಿಯ ಆಂಟಿಲಿಯಾದ ಹನ್ನೊಂದು ಪಟ್ಟು ಬೆಲೆ ಬಾಳುತ್ತದೆ ಭಾರತದ ಈ ವಸ್ತು!

Mukesh Antilia
Published on

ನವದೆಹಲಿ: ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ನಿವಾಸವಾದ ಆಂಟಿಲಿಯ (Antilia) ಇಡೀ ವಿಶ್ವದಲ್ಲೇ ಅತೀ ಹೆಚ್ಚಿನ ಐಶಾರಾಮಿ ಮತ್ತು ದುಬಾರಿ ಕಟ್ಟಡಗಳಲ್ಲಿ ಒಂದಾಗಿದೆ. ಇದರ ಮೌಲ್ಯ ಕೇಳಿ ಎಲ್ಲರೂ ಒಮ್ಮೆ ನಿಬ್ಬೆರಗಾಗುವುದಂತೂ ಸತ್ಯ. ಅಂಬಾನಿ ಪರಿವಾರದ ಆಂಟಿಲಿಯ ಒಟ್ಟು ರೂ.15000 ಕೋಟಿ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಇದರ 11 ಪಟ್ಟು ಹೆಚ್ಚಿನ ಬೆಲೆ ಬಾಳುವ ವಸ್ತುವೊಂದು ಭಾರತದ್ದಾಗಿದೆ. ಆದರೀಗ ಅದು ನಮ್ಮ ದೇಶದಲ್ಲಿಲ್ಲ. ಆ ವಸ್ತುವಿನ ಮೌಲ್ಯದಲ್ಲಿ ಸುಮಾರು 11 ಆಂಟಿಲಿಯಗಳನ್ನು ನಿರ್ಮಿಸಬಹುದಾಗಿದೆ.

ವಿಶ್ವದ ಅತ್ಯಂತ ದುಬಾರಿ ವಜ್ರವೊಂದರ ಕುರಿತಾಗಿ. ಸದ್ಯ ಇಂಗ್ಲೆಂಡ್​ನ ರಾಣಿಯ ಕಿರೀಟದಲ್ಲಿ ವಿರಾಜಮಾನವಾಗಿರುವ ಕೊಹಿನೂರ್ ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಮತ್ತು ಮೌಲ್ಯ ಹೊಂದಿರುವ ವಜ್ರಗಳಲ್ಲಿ ಒಂದು. ಈ ವಜ್ರದ ಮೂಲವನ್ನು ಹುಡುಕುತ್ತಾ ಹೊರಟರೆ ಅದು ಭಾರತವನ್ನು ತಲುಪುತ್ತದೆ. ಆಂಧ್ರಪ್ರದೇಶದ ಗೊಲ್ಕೊಂಡ ಕೋಟೆಯ ಬಳಿಯ ಕೊಲ್ಲೂರು ಗಣಿಯಿಂದ ಕೊಹಿನೂರ್ ಅನ್ನು ಹೊರತೆಗೆಯಲಾಗಿದೆ ಎಂದು ಹೇಳಲಾಗುತ್ತದೆ. ಈ ವಜ್ರ ಈಗಿನ ಕಾಲದಲ್ಲಿ ಬರೋಬ್ಬರಿ ರೂ. 1.67 ಲಕ್ಷ ಕೋಟಿ ಮೌಲ್ಯವನ್ನು ಹೊಂದಿದೆ. ಅದರರ್ಥ ಒಂದು ಕೊಹಿನೂರ್ ವಜ್ರದ ಬೆಲೆ ಸುಮಾರು 11 ಆ್ಯಂಟಿಲಿಯಗಳಿಗೆ ಸಮವಾಗಿದೆ.

Kohinoor Ambani

ಕೊಹಿನೂರ್ ಇಂಗ್ಲೆಂಡ್ ಅನ್ನು ತಲುಪುವ ಮೊದಲು ಹಲವಾರು ಭಾರತೀಯ ರಾಜರ ವಶದಲ್ಲಿತ್ತು. ಇರಾನ್​ನಿಂದ ಬಂದು ಗೊಲ್ಕೊಂಡ ಸಾಮ್ರಜ್ಯದ ಆಡಳಿತಗಾರನಾಗಿದ್ದ ಮಿರ್ ಜುಮ್ಲ ಇದನ್ನು ಮೊಗಲ್ ಸುಲ್ತಾನ ಶಹಜಹಾನ್​ಗೆ ನೀಡಿದ್ದ. ಗೊಲ್ಕೊಂಡದ ಸುಲ್ತಾನ ಅಬ್ದುಲ್ ಕುತುಬ್ ಶಾ ವಿರುದ್ಧ ಅಸಮಾದಾನ ಹೊಂದಿದ್ದ ಮಿರ್ ಜುಮ್ಲ ಕೊಹಿನೂರ್ ಮೂಲಕ ಗೊಲ್ಕೊಂಡದ ಸಂಪತ್ತಿನ ಮೇಲೆ ಶಹಜಹಾನ್​ನ ಗಮನ ಸೇಳೆಯುವ ಉದ್ದೇಶ ಹೊಂದಿದ್ದ ಎನ್ನಲಾಗುತ್ತದೆ. ಶಹಜಹಾನ್​ ತನ್ನ ಮಯೂರ ಸಿಂಹಾಸನದಲ್ಲಿ ಈ ವಜ್ರವನ್ನು ಅಳವಡಿಸಿದ್ದ. 1739ರಲ್ಲಿ ಇರಾನ್​ನ ಆಕ್ರಮಣಕಾರ ನಾದಿರ್ ಶಾ ದೆಹಲಿಯನ್ನು ಕೊಳ್ಳೆಹೊಡೆದು ಕೊಹಿನೂರ್ ಅನ್ನು ಹೊತ್ತೊಯ್ದಿದ್ದ.

ನಂತರ ಕೊಹಿನೂರ್ ಕೈ ಬದಲಾಗುತ್ತಾ ಅಫ್ಘಾನಿಸ್ಥಾನದ ಸುಲ್ತಾನ ಶುಜಾ ಶಾ ವಶಕ್ಕೆ ಬಂದಿತ್ತು. ಅದನ್ನು ಅವನು ಪಂಜಾಬಿನ ರಾಜನಾಗಿದ್ದ ರಣ್ಜಿತ್ ಸಿಂಗ್​ನಿಗೆ ಕಾಣಿಕೆಯಾಗಿ ನೀಡಿದ್ದ. ಪಂಜಾಬ್ ಬ್ರಿಟೀಷರ ಆಕ್ರಮಣಕ್ಕೆ ಒಳಗಾದ ನಂತರ ಕೊಹಿನೂರ್ ಅನ್ನು ಅವರು ವಶಪಡಿಸಿಕೊಂಡು ಇಂಗ್ಲೆಂಡ್​ಗೆ ಒಯ್ದಿದ್ದರು. ಈ ರೀತಿಯಾಗಿ ಬ್ರಿಟೀಷರ ಪಾಲದ ಕೊಹಿನೂರ್ ಅನ್ನು ಭಾರತಕ್ಕೆ ಮರಳಿ ತರಬೇಕೆಂಬ ಆಗ್ರಹ ಹಿಂದಿನಿಂದಲೂ ಕೇಳಿಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net