ವಯನಾಡು ಭೂಕುಸಿತ; ಸಾವಿನ ಸಂಖ್ಯೆ 176ಕ್ಕೆ ಏರಿಕೆ, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

Wayanad Landslide
Published on

ವಯನಾಡು: ದೇವರ ನಾಡು ಕೇರಳದ ವಯನಾಡಿನಲ್ಲಿ ಭಾರಿ ಮಳೆಗೆ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ. ಸದ್ಯ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 176ಕ್ಕೆ ಏರಿಕೆಯಾಗಿದೆ.ಹಲವಾರು ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ದುರ್ಘಟನೆ ಸಂಬಂಧ ಕೇರಳ ಸರ್ಕಾರ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿದ್ದು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣ ತಂಡ ಸೇರಿದಂತೆ ಎಲ್ಲ ರಕ್ಷಣಾ ಏಜೆನ್ಸಿಗಳು ಸ್ಥಳದಲ್ಲಿ ಬೀಡುಬಿಟ್ಟು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ.ಚುರಲ್ಪಾರ, ವೇಲಾರಿಮಲ, ಮುಂಡಕಯಿಲ್ ಮತ್ತು ಪೋತುಕಲು ಪ್ರದೇಶ ಸಂಪೂರ್ಣ ಹಾಳಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿಪಡಿಸಿದೆ.

ಭೂದುರಂತದಲ್ಲಿ ನಾಪತ್ತೆಯಾದವರ ಸಂಖ್ಯೆಯನ್ನು ಕಂಡುಹಿಡಿಯಲು ಇದೀಗ ಜಿಲ್ಲಾಧಿಕಾರಿಗಳು ಡೇಟಾವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಎಷ್ಟು ಜನರು ಮಣ್ಣಿನಡಿಯಲ್ಲಿ ಸಿಲುಕಿರಬಹುದು ಎಂಬುದನ್ನು ಸರಿಯಾಗಿ ತಿಳಿಯಲು ಜಿಲ್ಲಾಡಳಿತ ಅಧಿಕಾರಿಗಳು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ತಾತ್ಕಾಲಿಕ ಸೇತುವೆ ಬಳಸಿ ಇಲ್ಲಿಯವರೆಗೆ 1000ಕ್ಕಿಂತ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿರುವ ಭಾರತೀಯ ಸೇನೆ, ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಸಂತಾಪ ಸೂಚಿಸಿದ್ದು, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ಮೋದಿ ಕಾರ್ಯಾಲಯ 2 ಲಕ್ಷ ರೂ. ಗಾಯಾಳುಗಳಿಗೆ 50 ಸಾವಿರ ರೂ ಪರಿಹಾರವನ್ನು ಘೋಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net